ಕೋಲಾರ: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಮಹಿಳೆಯೊಬ್ಬರ ಶವವನ್ನು ಪಾರ್ಸೆಲ್ ಮಾದರಿಯಲ್ಲಿ ಸುತ್ತಿ ಎಸೆದಿರುವ ಭೀಕರ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಗ್ರಾಮದ ಬಳಿ ಬೆಳಕಿಗೆ ಬಂದಿದೆ. ಸುಮಾರು 35ರಿಂದ 40 ವರ್ಷ ವಯಸ್ಸಿನ ಮಹಿಳೆಯನ್ನು ಕೊಲೆ ಮಾಡಿ, ಕೈಕಾಲು ಕಟ್ಟಿ ಗೋಣಿ ಚೀಲದಲ್ಲಿ ತುಂಬಿ ಎಸೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೇತಮಂಗಲ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನವೆಂಬರ್ 27ರ ಗುರುವಾರ ಬೆಳಗ್ಗೆ ಸುಂದರಪಾಳ್ಯ ಗ್ರಾಮದ ಬಳಿಯ ಎಕ್ಸ್‌ಪ್ರೆಸ್ ಹೈವೇ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಪಾರ್ಸೆಲ್ ಮಾದರಿಯಲ್ಲಿ ಸುತ್ತಿಟ್ಟಿದ್ದ ವಸ್ತುವೊಂದು ಸ್ಥಳೀಯರ ಗಮನಕ್ಕೆ ಬಂದಿದೆ. ಅದರಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಬೇತಮಂಗಲ ಪೊಲೀಸರು ಪರಿಶೀಲನೆ ನಡೆಸಿದಾಗ ಅದರೊಳಗೆ ಮಹಿಳೆಯ ಮೃತದೇಹ ಇರುವುದು ಪತ್ತೆಯಾಗಿದೆ. ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಬಳಿಕ ಮೃತದೇಹವನ್ನು ಕುಳಿತ ಸ್ಥಿತಿಯಲ್ಲಿ ಇರಿಸಿ ಕೈಕಾಲುಗಳನ್ನು ಕಟ್ಟಿ ಗೋಣಿ ಚೀಲದೊಳಗೆ ತುಂಬಲಾಗಿದೆ.
ನಂತರ ಪ್ಲಾಸ್ಟಿಕ್ ಕವರ್ ಹಾಗೂ ಪಾರ್ಸೆಲ್ ಟೇಪ್‌ನಿಂದ ಬಿಗಿಯಾಗಿ ಸುತ್ತಿ, ವಾಷಿಂಗ್ ಮಷಿನ್ ಸಾಗಿಸುವ ಟ್ರಾಲಿಯೊಂದರ ಮೇಲೆ ಇರಿಸಿ ರಸ್ತೆಯ ಪಕ್ಕದಲ್ಲಿ ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಈ ರೀತಿ ವಿಲೇವಾರಿ ಮಾಡಿರುವ ರೀತಿ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಘಟನಾ ಸ್ಥಳಕ್ಕೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷ್ಮಯ್ಯ ಸೇರಿದಂತೆ ಸೋಕೋ ತಂಡ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇನ್ನು, ಕಾರಿನಲ್ಲಿ ಬಂದು ಶವವನ್ನು ಎಸೆದು ಹೋಗಿರುವ ಸಾಧ್ಯತೆ ವ್ಯಕ್ತವಾಗಿದ್ದು, ಹೆದ್ದಾರಿಯ ಟೋಲ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಸುಂದರಪಾಳ್ಯ ಪ್ರದೇಶವು ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಗಳಿಗೆ ಸಮೀಪದಲ್ಲಿರುವುದರಿಂದ ಹೊರರಾಜ್ಯಗಳಿಂದ ಮೃತದೇಹವನ್ನು ತಂದು ಎಸೆದಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆಕೆಯನ್ನು ಕೊಲೆ ಮಾಡಿದವರು ಯಾರು? ಯಾವ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ? ಬೇರೆಡೆಯಿಂದ ಶವವನ್ನು ತಂದು ಇಲ್ಲಿ ಎಸೆಯಲಾಗಿದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.








