ಮಂಗಳೂರು:ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಿನಲ್ಲಿ ವಂಚನೆ ಹಾಗೂ ದೈಹಿಕ ಶೋಷಣೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಬಾಲಕಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಮಾಹಿತಿಯ ಪ್ರಕಾರ, ಏಪ್ರಿಲ್ 23ರಂದು ಸಂಜೆ ಸುಮಾರು 4 ಗಂಟೆ ವೇಳೆಗೆ ಬಾಲಕಿ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಬಳಿಕ ಸ್ಥಳದಲ್ಲಿ ಪೋಷಕರಿಗೆ ಉದ್ದೇಶಿಸಿ ಬರೆದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಯುವಕನ ವಿರುದ್ಧ ಗಂಭೀರ ಆರೋಪಗಳನ್ನು ದಾಖಲಿಸಿರುವುದಾಗಿ ತಿಳಿದುಬಂದಿದೆ.
ಡೆತ್ ನೋಟ್‌ನಲ್ಲಿ, “ನಾನು ದೊಡ್ಡ ತಪ್ಪು ಮಾಡಿದ್ದೇನೆ. ಆದರೆ ಅವನು ಮಾತ್ರ ಸಂತೋಷದಿಂದ ಇದ್ದಾನೆ. ಅವನು ಹಿಂದೂ ಸಂಘಟನೆಗಳ ಜೊತೆಗಿದ್ದರೂ ನನಗೆ ಯಾವುದೇ ಸಹಾಯ ದೊರಕಲಿಲ್ಲ” ಎಂದು ಬಾಲಕಿ ಉಲ್ಲೇಖಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಬಾಲಕಿಯ ಸಾವಿನ ನಂತರ ರಾತ್ರಿ ವೇಳೆ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗಳ ಸಾವಿಗೆ ಅನೀಶ್ ಪೂಜಾರಿ ಎಂಬ ಯುವಕನೇ ಕಾರಣ ಎಂದು ಆರೋಪಿಸಿರುವ ಅವರು, ಬಾಲಕಿ ಗರ್ಭಿಣಿಯಾಗಿದ್ದ ವಿಚಾರವನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಅನೀಶ್ ಪೂಜಾರಿ ವಿರುದ್ಧ ಪೋಕ್ಸೋ ಕಾಯ್ದೆ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಈ ನಡುವೆ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮುಂದಿನ ಡಿಎನ್‌ಎ ಪರೀಕ್ಷೆಗಾಗಿ ವೈದ್ಯರು ಭ್ರೂಣದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.








