ಬೆಂಗಳೂರು: ಕುಣಿಗಲ್‌ನಲ್ಲಿ ಮನೆ ಬೀಗ ಮುರಿದು ಕಳ್ಳತನ ಪ್ರಕರಣ ಸಂಬಂಧ ಬೆಂಗಳೂರಿನ ಖತರ್ನಾಕ್ ದಂಪತಿಯನ್ನ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್, ಅನಿತಾ ಬಂಧಿತ ದಂಪತಿಗಳು.
ಮೇ 29 ರಂದು ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ರಿಜ್ವಾನ್ ಎಂಬುವರ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದರು. ನಿವೇಶನ ಖರೀದಿಗಾಗಿ ಮನೆಯಲ್ಲಿಟ್ಟಿದ್ದ ಬರೋಬ್ಬರಿ 25 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣವನ್ನ ದಂಪತಿ ದೋಚಿತ್ತು. ಬೆನ್ನಲ್ಲೇ ಮನೆಯ ಮಾಲೀಕ ರಿಜ್ವಾನ್, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬೆಂಗಳೂರಿನ ರಾಮಚಂದ್ರಾಪುರದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ದಂಪತಿಯಿಂದ 31 ಗ್ರಾಂ ಬಂಗಾರದ ಆಭರಣ, ಒಂದು ಬೈಕ್ ವಶಕ್ಕೆ ಪಡಿದಿದ್ದಾರೆ.
ಆರೋಪಿಗಳನ್ನ ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸ್ತಿದ್ದಾರೆ. ಈ ವೇಳೆ ಕೆಲವು ಸ್ಫೋಟಕ ಸತ್ಯ ಹೊರಬಿದ್ದಿದೆ. ಬಂಧಿತ ದಂಪತಿ ವಿರುದ್ಧ ಸುಮಾರು 35 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅನಿತಾಳ ಪತಿ ಮಂಜುನಾಥ್ ಮನೆಗಳ್ಳತನ ಮಾಡಿ ಚಿನ್ನಾಭರಣ, ಹಣವನ್ನು ಪತ್ನಿಗೆ ತಂದು ಕೊಡುತ್ತಿದ್ದ. ಅದನ್ನು ಅನಿತಾ ಮಾರಿ ಬಂದ ಹಣದಲ್ಲಿ ಮೋಜಿ ಮಸ್ತಿ ಮಾಡುತ್ತಿದ್ದಳು ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ








