ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕ ದ್ರವ್ಯವಾದ ಎಂಡಿಎಂಎ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತರನ್ನು ಬೆಂಗಳೂರಿನ ಹಲಸೂರು ಲಿಡೋ ಮಾಲ್ ನಿವಾಸಿ ಮೊಹಮ್ಮದ್ ನದೀಮ್ (27), ಉಳ್ಳಾಲದ ಸೋಮೇಶ್ವರ ಉಚ್ಚಿಲ ನಿವಾಸಿ ಉಮರುಲ್ ಫಾರೂಕ್ (30), ಕೆ.ಸಿ.ರೋಡ್ ಕಿನ್ಯಾ ನಿವಾಸಿ ಇಮ್ತಿಯಾಜ್ ಇಸ್ಮಾಯಿಲ್ ಕಿನ್ಯಾ (41) ಮತ್ತು ಕುಂಪಲ ಸುರಕ್ಷಾ ನಗರದ ನಿವಾಸಿ ಧನುಷ್ (29) ಎಂದು ಗುರುತಿಸಲಾಗಿದೆ.
ಬೆಂದೂರಿನ ಲಾಡ್ಜ್ ಒಂದರಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಎಂಡಿಎಂಎ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಮೊಹಮ್ಮದ್ ನದೀಮ್, ಉಮರುಲ್ ಫಾರೂಕ್ ಮತ್ತು ಇಮ್ತಿಯಾಜ್ ಇಸ್ಮಾಯಿಲ್ ಕಿನ್ಯಾ ಅವರನ್ನು ಬಂಧಿಸಿದ್ದಾರೆ.
ಪೊಲೀಸರು ಆರೋಪಿಗಳಿಂದ 35.53 ಗ್ರಾಂ ಎಂಡಿಎಂಎ ಮತ್ತು 7,030 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ಕದ್ರಿ ಪೊಲೀಸರಿಗೆ ಒಪ್ಪಿಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಬೊಲ್ಲಾರುವಿನ ಮುಳಿಹಿತ್ಲು ಬಳಿ ನಿಷೇಧಿತ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಧನುಷ್ ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆತನ ವಶದಲ್ಲಿದ್ದ 2.32 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.








