ಉಡುಪಿ: ಗೋವಾದ ಕ್ಯಾಲಂಗುಟ್ ಬೀಚ್ ಸಮೀಪದ ಲಾಡ್ಜ್‌ವೊಂದರಲ್ಲಿ ಮಲ್ಪೆ ಮೂಲದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಸಂದೀಪ್ ಸಾಲ್ಯಾನ್ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಸಂದೀಪ್ ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಜೂನ್ 30ರ ಸಂಜೆ ಅವರು ತಂಗಿದ್ದ ಲಾಡ್ಜ್‌ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಇದು ಹೃದಯಾಘಾತದಿಂದ ಸಂಭವಿಸಿದ ಸಾವೋ ಅಥವಾ ಬೇರೆ ಯಾವುದೇ ಕಾರಣವಿದೆಯೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದ್ದು, ಈ ಕುರಿತು ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ವೇಳೆ ಸಂದೀಪ್ ಅವರೊಂದಿಗೆ ಯುವತಿಯೊಬ್ಬರು ಇದ್ದರು ಎನ್ನಲಾಗಿದ್ದು, ಅವರ ಸಾವಿನ ಬಳಿಕ ಆಕೆ ಸ್ಥಳದಿಂದ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಈ ಕುರಿತು ಅಧಿಕೃತ ಪೊಲೀಸ್ ದೃಢೀಕರಣ ಇನ್ನಷ್ಟೇ ದೊರೆಯಬೇಕಿದೆ.
ಸಂದೀಪ್ ಸಾಲ್ಯಾನ್ ಅವರು ಕೆಲವು ವರ್ಷಗಳ ಹಿಂದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಕೆಲಸ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಗಾಗಿ ಟೂರಿಸ್ಟ್ ಬೋಟ್‌ನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಸ್ನೇಹಪರ ಸ್ವಭಾವ ಮತ್ತು ಸಮಾಜಮುಖಿ ಚಟುವಟಿಕೆಗಳಿಂದ ಪರಿಚಿತರಾಗಿದ್ದ ಸಂದೀಪ್ ಅವರ ಅಕಾಲಿಕ ನಿಧನದ ಸುದ್ದಿ ಮಲ್ಪೆ ಭಾಗದ ಸ್ನೇಹಿತರು ಹಾಗೂ ಪರಿಚಯಸ್ಥರಲ್ಲಿ ತೀವ್ರ ದುಃಖ ಉಂಟುಮಾಡಿದೆ. ಘಟನೆಯ ಹಿನ್ನೆಲೆ ಅನುಮಾನಾಸ್ಪದವಾಗಿರುವುದರಿಂದ ಸಾವಿನ ನಿಖರ ಕಾರಣ ಪೊಲೀಸ್ ತನಿಖೆಯ ಬಳಿಕವೇ ಬಹಿರಂಗವಾಗಬೇಕಿದೆ.








