ಬೆಂಗಳೂರು: ಎರಡು ದಶಕಗಳ ಹಿಂದೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೊಡ್ಡ ಮಳೂರು ಗ್ರಾಮದಲ್ಲಿ ಸಂಭವಿಸಿದ್ದ ತಾಯಿ ಮತ್ತು ನಾಲ್ಕೂವರೆ ವರ್ಷದ ಮಗುವಿನ ಸಾವಿನ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣವನ್ನು ನಾಲ್ಕು ತಿಂಗಳೊಳಗೆ ಹೊಸದಾಗಿ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ವಾಪಸ್ ಕಳಿಸಿದೆ.
ಖುಲಾಸೆ ತೀರ್ಪು ಪ್ರಶ್ನಿಸಿ ಮೃತ ಮಹಿಳೆಯ ತಂದೆ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಬಿ. ಪ್ರಮೋದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಕೊಲೆ ಆರೋಪವನ್ನು ನಿಗದಿಪಡಿಸಿ, ಹೊಸದಾಗಿ ವಿಚಾರಣೆ ನಡೆಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಲಾಗಿದೆ.ಮೃತಪಟ್ಟ ತಾಯಿ ಮತ್ತು ಮಗುವಿನ ದೇಹದ ಮೇಲೆ ಗಾಯದ ಗುರುತುಗಳಿದ್ದರೂ ತನಿಖಾಧಿಕಾರಿಗಳು ಮತ್ತು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸರಿಯಾಗಿ ಗುರುತಿಸಿ ನ್ಯಾಯಾಲಯಕ್ಕೆ ತಿಳಿಸಿಲ್ಲ. ವಿಚಾರಣಾ ನ್ಯಾಯಾಲಯವೂ ಸಾಕ್ಷಿಗಳ ಬಗ್ಗೆ ಪ್ರಶ್ನಿಸದೇ ಮೂಕಪ್ರೇಕ್ಷಕನಂತೆ ವರ್ತಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ:
ಮಧು ಅವರ ವಿವಾಹವು 1998ರಲ್ಲಿ ಕೆ. ನಾಗರಾಜ ಎಂಬುವವರೊಂದಿಗೆ ನಡೆದಿತ್ತು. ಮದುವೆ ಬಳಿಕ ಪತಿ ನಾಗರಾಜ, ಅತ್ತೆ ಪುಟ್ಟಮ್ಮ ಮತ್ತು ಮೈದುನ ಶ್ರೀಮಾನ್ ಹೆಚ್ಚಿನ ವರದಕ್ಷಿಣೆಗಾಗಿ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. 2004ರ ಅ.6ರಂದು ಮಧು ಮತ್ತು ಅವರ ನಾಲ್ಕೂವರೆ ವರ್ಷದ ಮಗನ ಶವಗಳು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ತನಿಖೆ ನಡೆಸಿದ ವರದಕ್ಷಿಣೆ ನಿಗ್ರಹ ದಳವು ಕೇವಲ ವರದಕ್ಷಿಣೆ ಸಾವು ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸೆಕ್ಷನ್ಗಳ ಅಡಿಯಲ್ಲಿ ಮಾತ್ರ ಪತಿ, ಮೈದುನ ಮತ್ತು ಅತ್ತೆ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಇದನ್ನು ವಿರೋಧಿಸಿದ ಮೃತ ಮಹಿಳೆಯ ತಂದೆ ಶಿವಣ್ಣ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆ ದೂರು ಆಧರಿಸಿದ ಪ್ರಕರಣ ಮತ್ತು ಪೊಲೀಸರು ದಾಖಲಿಸಿಕೊಂಡಿದ್ದ ಪ್ರತ್ಯೇಕ ಪ್ರಕರಣಗಳಲ್ಲೂ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ಆದೇಶಗಳನ್ನು ಪ್ರಶ್ನಿಸಿ ರಾಜ್ಯಸರ್ಕಾರ ಮತ್ತು ದೂರುದಾರರು ಹೈಕೋರ್ಟ್ಗೆ ಮೆಲ್ಮನವಿ ಸಲ್ಲಿಸಿದ್ದರು.
ತನಿಖಾಧಿಕಾರಿಗಳಿಗೆ ತರಬೇತಿ
ಭವಿಷ್ಯದಲ್ಲಿ ತನಿಖಾ ಮತ್ತು ವಿಚಾರಣ ಹಂತದಲ್ಲಿ ಲೋಪ ಉಂಟಾಗದಿರಲು ತನಿಖಾಧಿಕಾರಿಗಳು ಮತ್ತು ವೈದ್ಯರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಈ ಪ್ರಕರಣದ ತನಿಖಾಧಿಕಾರಿ ಮತ್ತು ವೈದ್ಯರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಲಾಗಿದೆ.








