ನವದೆಹಲಿ: ಬಿಹಾರ ಮೂಲದ ಯೂಟ್ಯೂಬರ್ ಹಾಗೂ ಪತ್ರಕರ್ತ ಮನೀಷ್ ಕಶ್ಯಪ್ ಅವರು ತಮ್ಮ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು E20 ಪೆಟ್ರೋಲ್ ಬಳಕೆಯಿಂದ ಹಾನಿಗೊಳಗಾಗಿದೆ ಎಂದು ಮಾಡಿದ್ದ ಆರೋಪವನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಅಧಿಕೃತವಾಗಿ ತಳ್ಳಿಹಾಕಿದೆ. ಕಂಪನಿಯು ಬಿಡುಗಡೆ ಮಾಡಿದ ಸ್ಪಷ್ಟೀಕರಣದಲ್ಲಿ, ಇನ್ನೋವಾ ಹೈಕ್ರಾಸ್ ಕಾರು 20 ಶೇಕಡಾ ಎಥೆನಾಲ್ ಮಿಶ್ರಿತ E20 ಪೆಟ್ರೋಲ್ಗೆ ಸಂಪೂರ್ಣ ಹೊಂದಾಣಿಕೆಯಾಗಿದ್ದು, ಅದರ ಬಳಕೆಯಿಂದ ಯಾವುದೇ ಗಂಭೀರ ಎಂಜಿನ್ ಹಾನಿಯಾಗಿಲ್ಲ ಎಂದು ತಿಳಿಸಿದೆ. ಕಾರಿನ ಸಮಸ್ಯೆಗೆ E20 ಪೆಟ್ರೋಲ್ ಕಾರಣವಲ್ಲ, ಬದಲಾಗಿ ಕಲುಷಿತ ಇಂಧನ ಬಳಕೆಯೇ ಕಾರಣ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಮನೀಷ್ ಕಶ್ಯಪ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೊ ವೈರಲ್ ಆದ ನಂತರ ದೇಶಾದ್ಯಂತ E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಕುರಿತು ಹೊಸ ಚರ್ಚೆ ಆರಂಭವಾಗಿತ್ತು. ವಿಡಿಯೊದಲ್ಲಿ, ತಮ್ಮ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು ಕೇವಲ 12 ಸಾವಿರ ಕಿಲೋಮೀಟರ್ ಸಂಚರಿಸಿದ ಬಳಿಕ ಎಂಜಿನ್ನಲ್ಲಿ ತೀವ್ರ ಕಂಪನ, ನಾಕಿಂಗ್ ಹಾಗೂ ವಾಹನ ನಿಂತುಹೋಗುವಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಅವರು ಆರೋಪಿಸಿದ್ದರು. ಕಾರಿನ ಫ್ಯುಯೆಲ್ ಫಿಲ್ಲರ್ ಕ್ಯಾಪ್ ಮೇಲೆಯೇ E20 ಪೆಟ್ರೋಲ್ಗೆ ಹೊಂದಿಕೊಳ್ಳುತ್ತದೆ ಎಂದು ಉಲ್ಲೇಖಿಸಿದ್ದರೂ, E20 ಬಳಕೆಯ ನಂತರವೇ ಈ ಸಮಸ್ಯೆಗಳು ಆರಂಭವಾದವು ಎಂದು ಅವರು ಹೇಳಿದ್ದರು.
ವಿಡಿಯೊದಲ್ಲಿ ಕಾರಿನ ಫ್ಯುಯೆಲ್ ಟ್ಯಾಂಕ್ ಹಾಗೂ ಫ್ಯುಯೆಲ್ ಲೈನ್ನಿಂದ ಹೊರತೆಗೆದ ಇಂಧನದ ಮಾದರಿಗಳನ್ನು ತೋರಿಸಿದ ಮನೀಷ್ ಕಶ್ಯಪ್, ಅದರಲ್ಲಿ ಧೂಳು, ಕಸ ಹಾಗೂ ಅಸಾಮಾನ್ಯ ಪ್ರಮಾಣದ ಎಥೆನಾಲ್ ಇರುವುದಾಗಿ ಆರೋಪಿಸಿದ್ದರು. ಅಲ್ಲದೆ ಪೆಟ್ರೋಲ್ ಬಂಕ್ಗಳಲ್ಲಿ ದೊರೆಯುವ ಇಂಧನದ ಗುಣಮಟ್ಟದ ಬಗ್ಗೆಯೂ ಪ್ರಶ್ನೆ ಎತ್ತಿದ್ದರು.
ಇದರ ಜೊತೆಗೆ, ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಣ ಯೋಜನೆಯನ್ನೂ ಅವರು ಟೀಕಿಸಿದ್ದರು. ವಾಹನದಲ್ಲಿ ಇಂಧನ ಸಂಬಂಧಿತ ಸಮಸ್ಯೆ ಉಂಟಾದರೆ ಅದರ ಹೊಣೆ ಯಾರು ಹೊರುತ್ತಾರೆ? ಪೆಟ್ರೋಲ್ ಬಂಕ್, ತೈಲ ಸಂಸ್ಕರಣಾ ಘಟಕ, ವಾಹನ ತಯಾರಕ ಸಂಸ್ಥೆ ಅಥವಾ ನೀತಿ ರೂಪಿಸುವ ಸರ್ಕಾರವೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದರು. ಇದೇ ವೇಳೆ, ಗ್ರಾಹಕರಿಗೆ E20 ಪೆಟ್ರೋಲ್ ಮಾತ್ರವಲ್ಲದೆ ಸಾಮಾನ್ಯ ಪೆಟ್ರೋಲ್ ಖರೀದಿಸುವ ಆಯ್ಕೆಯೂ ಇರಬೇಕು ಎಂದು ಒತ್ತಾಯಿಸಿದ್ದರು.
ಇದಲ್ಲದೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಮೇಲೂ ಮನೀಷ್ ಕಶ್ಯಪ್ ಟೀಕಾ ಪ್ರಹಾರ ನಡೆಸಿದ್ದು, ಎಥೆನಾಲ್ ಮಿಶ್ರಿತ ಇಂಧನ ನೀತಿಯ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಆದರೆ ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ವಾಹನದಲ್ಲಿ ಕಂಡುಬಂದ ಸಮಸ್ಯೆಗೆ E20 ಪೆಟ್ರೋಲ್ ಕಾರಣವಲ್ಲ ಎಂದು ಪುನರುಚ್ಚರಿಸಿದ್ದು, ಕಲುಷಿತ ಇಂಧನ ಬಳಕೆಯಿಂದ ಈ ತೊಂದರೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದೆ.








