ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಗೆ ಸೇರಿದ ಬಸ್‌ವೊಂದು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಸಂಚರಿಸಿರುವ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಬಸ್‌ನ ಹೆಡ್‌ಲೈಟ್‌ಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಕಂಡಕ್ಟರ್ ಮೊಬೈಲ್‌ನ ಟಾರ್ಚ್ ಬೆಳಗಿದರೆ, ಅದರ ಸಹಾಯದಿಂದ ಚಾಲಕ ಬಸ್ ಚಲಾಯಿಸಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಮಾಹಿತಿಯ ಪ್ರಕಾರ, ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುವ ಈ ಬಸ್‌ನ ಹೆಡ್‌ಲೈಟ್‌ಗಳು ಕಳೆದ 15 ದಿನಗಳಿಂದ ಕೆಟ್ಟು ಹೋಗಿದ್ದರೂ, ಅವುಗಳನ್ನು ದುರಸ್ತಿ ಮಾಡಿಲ್ಲ ಎನ್ನಲಾಗಿದೆ. ಇದರಿಂದ ರಾತ್ರಿ ವೇಳೆ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಓಡಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಲಬುರಗಿ–ಚಿಂಚೋಳಿ ನಡುವಿನ ಅಂತರ ಸುಮಾರು 90 ಕಿಲೋಮೀಟರ್ ಆಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಬಸ್ ಸಂಚರಿಸಿರುವುದು ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದೆ ಎಂಬ ಆರೋಪ ಕೇಳಿಬಂದಿದೆ. ಹೆಡ್‌ಲೈಟ್ ಇಲ್ಲದೆ ರಾತ್ರಿ ವೇಳೆ ಬಸ್ ಓಡಿಸುವುದು ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದ್ದು, ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಸ್‌ಗಳನ್ನು ರಸ್ತೆಗೆ ಇಳಿಸುವ ಮೊದಲು ಅವುಗಳ ತಾಂತ್ರಿಕ ಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ಬಸ್‌ನ ಹೆಡ್‌ಲೈಟ್‌ಗಳನ್ನು ತಕ್ಷಣ ದುರಸ್ತಿ ಮಾಡಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಘಟನೆ ಕುರಿತು ಕೆಕೆಆರ್‌ಟಿಸಿ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.








