ಪಡುಬಿದ್ರಿ: ನಡಿಪಟ್ಟಣ ಕರಾವಳಿ ಭಾಗದಲ್ಲಿ ಮರುಕಳಿಸುತ್ತಿರುವ ಸಮುದ್ರ ಕೊರೆತದಿಂದ ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಆ ಪ್ರದೇಶಕ್ಕೆ ಶಾಶ್ವತ ರಕ್ಷಣಾ ವ್ಯವಸ್ಥೆ ಕಲ್ಪಿಸುವಂತೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಆರೋಗ್ಯ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸಿ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮನವಿಯಲ್ಲಿ, ಶ್ರೀ ಪಾಂಡುರಂಗ ಕೋಟ್ಯಾನ್ ಅವರ ಮನೆಯ ಸಮೀಪದಿಂದ ಸಾಗರ ವಿದ್ಯಾ ಮಂದಿರದವರೆಗೆ ಹರಡಿರುವ ಸುಮಾರು 700 ಮೀಟರ್ ಉದ್ದದ ಕರಾವಳಿ ಪ್ರದೇಶವು ಸಮುದ್ರದ ಅಬ್ಬರಕ್ಕೆ ತುತ್ತಾಗುತ್ತಿದ್ದು, ಅಲ್ಲಿ ಶಾಶ್ವತ ಕಡಲ ತಡೆಗೋಡೆ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ ಎಂದು ತಿಳಿಸಲಾಗಿದೆ.
ಸಮುದ್ರದ ಅಲೆಗಳ ಪ್ರಭಾವದಿಂದ ಭೂ ಕುಸಿತ ಹೆಚ್ಚಾಗುತ್ತಿದ್ದು, ಹಲವು ಮನೆಗಳು ಹಾಗೂ ಸಾರ್ವಜನಿಕ ಸೌಲಭ್ಯಗಳು ಅಪಾಯದ ವಲಯಕ್ಕೆ ಸಿಲುಕಿವೆ. ಇದರ ಪರಿಣಾಮ ಮೀನುಗಾರ ಕುಟುಂಬಗಳು ಆತಂಕದಲ್ಲಿದ್ದು, ಪ್ರತಿ ಮಳೆಗಾಲದಲ್ಲೂ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಸಮೀಕ್ಷೆ ಹಾಗೂ ತಾಂತ್ರಿಕ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿರುವುದರಿಂದ, ವಿಳಂಬ ಮಾಡದೆ ಆಡಳಿತಾತ್ಮಕ ಅನುಮೋದನೆ ನೀಡುವ ಜೊತೆಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಶಾಶ್ವತ ತಡೆಗೋಡೆ ನಿರ್ಮಾಣವಾದಲ್ಲಿ ಸಮುದ್ರ ಕೊರೆತದ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ದೊರೆಯಲಿದ್ದು, ಕರಾವಳಿ ಪ್ರದೇಶದ ನಿವಾಸಿಗಳ ಮನೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ಹಾಗೂ ಮೀನುಗಾರರ ಜೀವನೋಪಾಯವನ್ನು ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ್ ವಿ. ಅಮೀನ್ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಈ ಬೇಡಿಕೆಗೆ ಆದ್ಯತೆ ನೀಡಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.








