ಮಂಗಳೂರು: ಬೆಳ್ತಂಗಡಿ ತಾಲೂಕಿನ ಕಲ್ಟಿಂಜ ಗ್ರಾಮದ ನಿಡಿಗಲ್ ಪ್ರದೇಶದಲ್ಲಿರುವ ಕೃಷಿಕ ಹಾಗೂ ಧರ್ಮಸ್ಥಳ ದೇವಸ್ಥಾನದ ರೆವೆನ್ಯೂ ವಿಭಾಗದ ವ್ಯವಸ್ಥಾಪಕರಾದ ಶುಭ ಚಂದ್ರರಾಜ್ ಅವರ ಮನೆಗೆ ದರೋಡೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಏಳು ಮಂದಿಯನ್ನು ಮಂಗಳೂರು ನಗರದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಗಳ ವಿರುದ್ಧದ ಆರೋಪಗಳನ್ನು ಸಮರ್ಪಕವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಪಿ. ಇರ್ಫಾನ್, ಚಿದಾನಂದ ಗೌಡ ಡಿ., ಮೊಹಮ್ಮದ್ ತೌಸೀಫ್, ಮೋಹನ, ನಿತಿನ್ ಕೋಟ್ಯಾನ್, ಮೊಹಮ್ಮದ್ ಆಶಿಕ್ ಹಾಗೂ ತೌಷಿರ್ @ ಪತ್ತೊಂಜಿ ತೌಷಿರ್ ಆರೋಪಿಗಳಾಗಿದ್ದರು. ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಾಟೆ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿವರದ ಪ್ರಕಾರ, ಆರೋಪಿಗಳು ತಲವಾರು, ಖಡ್ಗ ಹಾಗೂ ಚೂರಿಗಳಂತಹ ಮಾರಕಾಸ್ತ್ರಗಳನ್ನು ಹಿಡಿದು ಶುಭ ಚಂದ್ರರಾಜ್ ಅವರ ‘ಓಂಕಾರ ನಿಲಯ’ ಮನೆಗೆ ಅಕ್ರಮವಾಗಿ ನುಗ್ಗಲು ಯತ್ನಿಸಿದ್ದರು ಎನ್ನಲಾಗಿತ್ತು. ಈ ವೇಳೆ ಮನೆಯ ಸಾಕು ನಾಯಿಯು ಜೋರಾಗಿ ಬೊಗಳಲು ಆರಂಭಿಸಿದಾಗ, ಅದನ್ನು ಚೂರಿ ಮತ್ತು ಖಡ್ಗದಿಂದ ಹಲ್ಲೆ ನಡೆಸಿ ಕೊಂದಿರುವ ಆರೋಪವೂ ದಾಖಲಾಗಿತ್ತು.
ಬಳಿಕ ಮನೆಯ ಹಿಂಬಾಗಿಲನ್ನು ಒಡೆದು ಒಳನುಗ್ಗಲು ಯತ್ನಿಸಿದಾಗ ಮನೆಯವರು ಎಚ್ಚರಗೊಂಡು ಕೂಗಾಟ ನಡೆಸಿದ್ದರು. ಇದರಿಂದ ಆರೋಪಿಗಳು ತಾವು ಬಂದಿದ್ದ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ಸುಮಾರು 15 ಮಂದಿ ಸಾಕ್ಷಿಗಳನ್ನು ಪರೀಕ್ಷಿಸಲಾಯಿತು. ಘಟನೆಯ ಕುರಿತು ಪ್ರತ್ಯಕ್ಷ ಸಾಕ್ಷಿಗಳು ಹಾಗೂ ಹತ್ಯೆಯಾದ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರೂ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ್ದರು. ಆದಾಗ್ಯೂ, ಆರೋಪಿಗಳ ವಿರುದ್ಧದ ಆರೋಪಗಳನ್ನು ಅನುಮಾನಾತೀತವಾಗಿ ಸಾಬೀತುಪಡಿಸಲು ಅಗತ್ಯವಾದ ದೃಢವಾದ ಸಾಕ್ಷ್ಯಗಳು ಲಭ್ಯವಾಗಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ಆರೋಪಗಳಿಂದ ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳ ಪರವಾಗಿ ವಕೀಲರಾದ ವೇಣುಕುಮಾರ್ ಹಾಗೂ ಯುವರಾಜ್ ಕೆ. ಅಮೀನ್ ವಾದ ಮಂಡಿಸಿದ್ದರು.








