ಧಾರವಾಡ: ಜಿಲ್ಲೆಯ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ರನ್ಕಾಸ್ಟೆಲ್ಲೋ ಅಪಾರ್ಟ್‌ಮೆಂಟ್‌ನಲ್ಲಿ ಚಿರಾಯು ಆಸ್ಪತ್ರೆಯ ವೈದ್ಯ ಕಿರಣ್ ಹೊನ್ನಣ್ಣನವರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಅವರ 8 ವರ್ಷದ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿರಾಯು ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಕಿರಣ್ ಹೊನ್ನಣ್ಣವರ್ (45) ಹತ್ಯೆಯಾದ ದುರ್ದೈವಿ. ಇವರ ಪತ್ನಿ ಪ್ರಿಯಾಂಕಾ ಕೂಡ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರಿಯಾಂಕಾ ತನ್ನ ಪತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.
ಪತಿಯನ್ನು ಒಂದು ಕೋಣೆಯಲ್ಲಿ ಕೊಂದ ಬಳಿಕ ಈಕೆಯ ಕ್ರೌರ್ಯ ಅಲ್ಲಿಗೆ ನಿಲ್ಲಲಿಲ್ಲ. ಮತ್ತೊಂದು ಕೋಣೆಯಲ್ಲಿದ್ದ ಎಂಟು ವರ್ಷದ ಮಗ ನೇಹಿತ್ ಮೇಲೂ ಚಾಕುವಿನಿಂದ ಮನಬಂದಂತೆ ಇರಿದಿದ್ದಾಳೆ. ರಕ್ತದ ಮಡುವಿನಲ್ಲಿ ಉಸಿರಾಡಲು ಒದ್ದಾಡುತ್ತಿದ್ದ ಮಗುವಿನ ಪಕ್ಕದಲ್ಲೇ ಕುಳಿತು ಈಕೆ ಅತ್ಯಂತ ನಿರ್ಲಜ್ಜವಾಗಿ ತನ್ನ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಳು ಎಂದು ತಿಳಿದುಬಂದಿದೆ.
ಇನ್ನು ಅಪಾರ್ಟ್‌ಮೆಂಟ್‌ನಲ್ಲಿದ್ದ ನೆರೆಹೊರೆ ಹಾಗೂ ಇತರರು ಪೊಲೀಸರಿಗೆ ಕೊಲೆಯಾದ ಘಟನೆ ಬಗ್ಗೆ ಮಾಹಿತಿ ನೀಡಿದರೂ, ಮಗುವನ್ನು ಉಳಿಸುವ ಪ್ರಯತ್ನ ಮಾಡಿಲ್ಲ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ, ಮಗು ನೇಹಿತ್ ಇನ್ನು ಉಸಿರಾಡುತ್ತಿರುವುದನ್ನು ಗಮನಿಸಿದರು. ತಕ್ಷಣವೇ ತಡಮಾಡದೆ ಮಗುವನ್ನು ತಮ್ಮ ಕೈಯಲ್ಲೇ ಹೊತ್ತುಕೊಂಡು ಕೆಳಗೆ ತಂದು ಆಸ್ಪತ್ರೆಗೆ ರವಾನಿಸಿದ್ದಾರೆ.
ವಿದ್ಯಾಗಿರಿ ಮತ್ತು ಉಪನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಪತ್ನಿ ಪ್ರಿಯಾಂಕಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸುಸಂಸ್ಕೃತ ಕುಟುಂಬದಲ್ಲಿ ನಡೆದ ಈ ರಕ್ತಸಿಕ್ತ ಅಧ್ಯಾಯ ಇಡೀ ಧಾರವಾಡವನ್ನು ಸ್ತಬ್ಧಗೊಳಿಸಿದೆ.








