ಶಿಮ್ಲಾ: ಹಲವು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಟಾಟಾ ಸುಮೋ ಟ್ಯಾಕ್ಸಿ ಮೇಲೆ ಬೃಹತ್ ಬಂಡೆಯೊಂದು ಉರುಳಿಬಿದ್ದ ಪರಿಣಾಮ, ಟ್ಯಾಕ್ಸಿ ನಜ್ಜುಗುಜ್ಜಾಗಿ 13 ಜನ ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದೆ.
ಘಟನೆ ಉದಯಪುರ-ಕಿಲ್ಲರ್ ರಸ್ತೆಯ ಕಾಡು ನಾಲಾ ಸಮೀಪ ಸಂಭವಿಸಿದೆ. ಚಂಬಾ ಜಿಲ್ಲೆಯ ನಿವಾಸಿಗಳನ್ನು ಹೊತ್ತೊಯ್ಯುತ್ತಿದ್ದ ಟಾಟಾ ಸುಮೋ ಟ್ಯಾಕ್ಸಿ ರಸ್ತೆ ಮೂಲಕ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಭೂಕುಸಿತ ಉಂಟಾಗಿ, ಬೃಹತ್ ಬಂಡೆಗಳು ವಾಹನದ ಮೇಲೆ ಉರುಳಿಬಿದ್ದಿವೆ. ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿ ಪ್ರಯಾಣಿಕರು ಅದರೊಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಭೂಕುಸಿತದ ಹಿನ್ನೆಲೆ ಗುರುವಾರ ರಾತ್ರಿ ಉದಯಪುರ-ಕಿಲ್ಲರ್ ರಸ್ತೆಯನ್ನ ಮುಚ್ಚಲಾಗಿತ್ತು. ಇದರಿಂದ ಪ್ರಯಾಣಿಕರು ತಿಂಡಿ ಗ್ರಾಮದಲ್ಲಿ ತಂಗಿದ್ದರು. ನಂತರ ರಸ್ತೆ ಸಂಚಾರ ತೆರವುಗೊಳಿಸುತ್ತಿದ್ದಂತೆ ಮತ್ತೆ ಪ್ರಯಾಣ ಆರಂಭಿಸಿದ್ದರು. ಆದ್ರೆ ಪ್ರಯಾಣಿಕರು ಕಾಡು ನಾಲಾ ಸಮೀಪಿಸುತ್ತಿದ್ದಂತೆ ಮತ್ತೊಮ್ಮೆ ಭೂಕುಸಿತ ಸಂಭವಿಸಿ ಈ ಅವಘಡ ನಡೆದಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳೀಯ ಪೊಲೀಸರು, ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.








