ಮುಂಬೈ : ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳ ಕ್ಯಾಂಟೀನ್‌ಗಳಲ್ಲಿ ಆಹಾರ ನೈರ್ಮಲ್ಯ ತಪಾಸಣೆ ನಡೆಸಲಾಗುತ್ತಿದೆಯೇ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದ ಮರುದಿನವೇ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಂಡವು ಹೈಕೋರ್ಟ್ ಆವರಣದಲ್ಲಿರುವ ಕ್ಯಾಂಟೀನ್‌ಗಳ ಮೇಲೆಯೇ ರೇಡ್ ನಡೆಸಿದೆ. ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಒಂದು ಕ್ಯಾಂಟೀನ್‌ಗೆ ‘ಬಿಸಿನೆಸ್ ಕ್ಲೋಸ್’ ಆದೇಶ ನೀಡಲಾಗಿದ್ದರೆ, ಉಳಿದ ಎರಡಕ್ಕೆ ಸುಧಾರಣಾ ನೋಟಿಸ್ ಜಾರಿಗೊಳಿಸಲಾಗಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಹಾಗೂ ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ಪೀಠವು ಎಫ್‌ಡಿಎ ನಡೆಯುತ್ತಿರುವ ನೈರ್ಮಲ್ಯ ಅಭಿಯಾನದ ಕುರಿತು ವಿಚಾರಣೆ ನಡೆಸುವ ವೇಳೆ, “ಸರ್ಕಾರಿ ಇಲಾಖೆಗಳು ಹಾಗೂ ಶಾಸನಬದ್ಧ ಸಂಸ್ಥೆಗಳು ನಡೆಸುವ ಕ್ಯಾಂಟೀನ್‌ಗಳನ್ನು ಪರಿಶೀಲಿಸುತ್ತಿದ್ದೀರಾ?” ಎಂದು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಜಾಗೃತಗೊಂಡ ಎಫ್‌ಡಿಎ ತಂಡ, ಹೈಕೋರ್ಟ್‌ನ 3 ಕ್ಯಾಂಟೀನ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ತಪಾಸಣೆ ವೇಳೆ 3ನೇ ಮಹಡಿಯಲ್ಲಿರುವ ಬಾಂಬೆ ಬಾರ್ ಅಸೋಸಿಯೇಷನ್ (BBA) ಕ್ಯಾಂಟೀನ್ ಕಡ್ಡಾಯ ಎಫ್‌ಎಸ್‌ಎಸ್‌ಎಐ ಪರವಾನಗಿ ಇಲ್ಲದೆ ನಡೆಯುತ್ತಿರುವುದು ಕಂಡುಬಂದಿದ್ದರಿಂದ ತಕ್ಷಣವೇ ಕಾರ್ಯಾಚರಣೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ₹2 ಲಕ್ಷದವರೆಗೆ ದಂಡ ಹಾಗೂ ಕಾನೂನು ಕ್ರಮ ಜರುಗಿಸುವುದಾಗಿ ಎಫ್‌ಡಿಎ ಎಚ್ಚರಿಸಿದೆ. ಇನ್ನು ನೆಲಮಹಡಿಯ ಸಿಬ್ಬಂದಿ ಕ್ಯಾಂಟೀನ್‌ನಿಂದ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಸಣ್ಣ ಟೀ ಕ್ಯಾಂಟೀನ್ ಒಂದನ್ನು ಸ್ವಯಂಪ್ರೇರಣೆಯಿಂದ ಮುಚ್ಚಲಾಗಿದೆ.
ಐಎಎಸ್ ಅಧಿಕಾರಿ ತುಕಾರಾಂ ಮುಂಢೆ ಅವರು ಎಫ್‌ಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದ್ದು, ಮಂತ್ರಾಲಯ ಕ್ಯಾಂಟೀನ್‌ನ ನೈರ್ಮಲ್ಯದ ವೈಪರೀತ್ಯದ ಕುರಿತಾಗಿಯೂ ಹೈಕೋರ್ಟ್ ಸ್ಪಷ್ಟೀಕರಣ ಕೇಳಿದೆ.








