ಮಂಗಳೂರು: ಎಂಆರ್ಪಿಎಲ್ ತೈಲ ಸ್ಥಾವರದಲ್ಲಿ ಬುಧವಾರ ಭಾರೀ ಸ್ಫೋಟ ಸಂಭವಿಸಿದ್ದು, ಮಂಗಳೂರಿನ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭೂಕಂಪದ ಅನುಭವದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬಜ್ಪೆ, ಕಳವಾರು, ಬೈಕಂಪಾಡಿ, ಜೋಕಟ್ಟೆ, ಸುರತ್ಕಲ್ ಹಾಗೂ ಕಾಟಿಪಳ್ಳ ಭಾಗಗಳಲ್ಲಿ ಸ್ಫೋಟದ ಭಾರೀ ಶಬ್ದ ಕೇಳಿಬಂದಿದ್ದು, ದಟ್ಟ ಹೊಗೆ ಆವರಿಸಿದೆ.
ತೈಲ ಸ್ಥಾವರದ ಮೂರನೇ ಪ್ಲಾಂಟ್ ಇರುವ ಜೋಕಟ್ಟೆ ಭಾಗದಲ್ಲಿ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಅಲ್ಲಿಂದ ಬೆಂಕಿಯ ಜ್ವಾಲೆ ಮತ್ತು ಭಾರೀ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಕೆಲವು ಮನೆಗಳು ನಡುಗಿದ್ದು, ಆತಂಕಗೊಂಡ ನಿವಾಸಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಕೆಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಮೂರನೇ ಪ್ಲಾಂಟ್ನ ಕಟ್ಟಡದ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆಯಿಂದ ಒಳಭಾಗದಲ್ಲಿ ನಿಖರವಾಗಿ ಏನಾಗಿದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಸ್ಫೋಟದ ಶಬ್ದ ಬೈಕಂಪಾಡಿ ಮತ್ತು ಸುರತ್ಕಲ್ವರೆಗೂ ಕೇಳಿಸಿತು ಎನ್ನಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ತೈಲ ಸ್ಥಾವರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತಲೂ ದಟ್ಟ ಹೊಗೆ ಕಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಂಕಿ ನಂದಿಸುವ ಕಾರ್ಯಕ್ಕಾಗಿ ಮಂಗಳೂರು ಹಾಗೂ ಪಾಂಡೇಶ್ವರ ಸೇರಿದಂತೆ ಸಮೀಪದ ಪ್ರದೇಶಗಳ ಅಗ್ನಿಶಾಮಕ ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಸದ್ಯ ಬೆಂಕಿ ನಿಯಂತ್ರಿಸುವ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಸಾವು-ನೋವು ಸಂಭವಿಸಿರುವ ಬಗ್ಗೆ ಆ ವೇಳೆಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಎಂಆರ್ಪಿಎಲ್ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಂದಿರಲಿಲ್ಲ.








