ನವದೆಹಲಿ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ವಿಡಿಯೋ ರಿಲೀಸ್ ಮಾಡಿದ್ದರು. ಆ ವಿಡಿಯೋವನ್ನು ಫೇಸ್ಬುಕ್ನಿಂದ ಕೆಲಕಾಲ ಡಿಲೀಟ್ ಮಾಡಲಾಗಿತ್ತು. ಈ ಘಟನೆ ದೇಶಾದ್ಯಂತ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ಮೆಟಾ (Meta) ಸಂಸ್ಥೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಕ್ಷಮೆಯಾಚನೆಗೆ ಪಟ್ಟುಹಿಡಿದಿತ್ತು. ಇದೀಗ ಕೊನೆಗೂ ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಈ ಕುರಿತು ಕ್ಷಮೆಯಾಚಿಸಿದ್ದಾರೆ.
ಮೆಟಾ ಪ್ಲಾಟ್ಫಾರ್ಮ್ಗಳಲ್ಲಿ ಬಾಲ ಲೈಂಗಿಕ ಶೋಷಣೆ ವಿಷಯ, ಡೀಪ್ಫೇಕ್ ವಿಷಯಗಳು ಮತ್ತು ಪ್ಲಾಟ್ಫಾರ್ಮ್ ಕಾರ್ಯಾಚರಣೆಯಲ್ಲಾದ ದೋಷಗಳ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕಠಿಣ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮೆಟಾ ಸಿಇಒ ಮಾರ್ಕ್ ಝುಕರ್ಬರ್ಗ್ ಕ್ಷಮೆಯಾಚಿಸಿದ್ದಾರೆ. ತಮ್ಮ ತಪ್ಪಿಗೆ ಕ್ಷಮೆ ಕೋರಿದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದಿಂದ ಮೆಟಾ ಅಧಿಕಾರಿಗಳನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣವು ನಿರ್ದಿಷ್ಟ ಬಳಕೆದಾರರಿಗೆ ಯಾವ ವಿಷಯ ತಲುಪಬೇಕು ಎಂಬುದನ್ನು ತಾನೇ ಆಯ್ಕೆ ಮಾಡುತ್ತಿದ್ದರೆ, ಅದು ಭಾರತದ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಮಧ್ಯವರ್ತಿ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿಷಯ ಪ್ರಸಾರವನ್ನು ನಿಯಂತ್ರಿಸುವ ಪ್ಲಾಟ್ಫಾರ್ಮ್ಗಳು ‘ಸೇಫ್ ಹಾರ್ಬರ್’ (ಸುರಕ್ಷಿತ ರಕ್ಷಣೆ) ಪಡೆಯಲು ಸಾಧ್ಯವಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ.








