ಮಂಗಳೂರು : ಶೇರು ಮಾರುಕಟ್ಟೆಯಲ್ಲಿ ಭಾರಿ ಲಾಭಾಂಶ ಕೊಡುವುದಾಗಿ ವಾಟ್ಸಾಪ್ನಲ್ಲಿ ಜಾಹೀರಾತು ನೀಡಿ, ಆಪ್ ಡೌನ್ಲೋಡ್ ಮಾಡಿಸಿ 55 ವರ್ಷದ ಮಹಿಳೆಯೊಬ್ಬರಿಗೆ ಬರೋಬ್ಬರಿ ₹10,50,000 (ರೂ. 10.50 ಲಕ್ಷ) ಆನ್ಲೈನ್ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ದಿನಾಂಕ 29-06-2026ರಂದು ಸಂತ್ರಸ್ತ ಮಹಿಳೆಯು ತಮ್ಮ ಮೊಬೈಲ್ನಲ್ಲಿ ವಾಟ್ಸಾಪ್ ಬಳಸುತ್ತಿದ್ದಾಗ ‘Private Equity Fund Investment Block Deal’ ಎಂಬ ಹೂಡಿಕೆ ಕುರಿತ ಜಾಹೀರಾತು ಕಂಡಿದೆ. ಅದರಲ್ಲಿ ನೀಡಲಾಗಿದ್ದ ಲಿಂಕ್ ಕ್ಲಿಕ್ ಮಾಡಿದಾಗ, ‘B.R.NOVA’ ಎಂಬ ಆ್ಯಪ್ ಡೌನ್ಲೋಡ್ ಮಾಡಲು ಸೂಚಿಸಲಾಗಿದೆ. ಬಳಿಕ ‘ಹಾರ್ದಿಕ್ ಜೋಶಿ’ (ಮೊಬೈಲ್ ಸಂಖ್ಯೆ: 8763273640) ಎಂಬ ವ್ಯಕ್ತಿ ಸಂತ್ರಸ್ತೆಯನ್ನು ಸಂಪರ್ಕಿಸಿ, ತಮ್ಮ ಬ್ಲಾಕ್ ಡೀಲ್ ಹೂಡಿಕೆಯು ‘ಸೆಬಿ’ ನೋಂದಾಯಿತವಾಗಿದ್ದು, ಹಣ ತೊಡಗಿಸಿದರೆ ಹೆಚ್ಚಿನ ಲಾಭ ಬರುವುದಾಗಿ ನಂಬಿಸಿದ್ದಾನೆ.
ಅಲ್ಲದೆ, ‘Investment Plan VIP1’ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ಆಪ್ ಮೂಲಕ ಚಾಟ್ ಮಾಡುತ್ತಾ ಸಂತ್ರಸ್ತೆಯ ವಿಶ್ವಾಸ ಗಳಿಸಿದ್ದಾನೆ. ವಂಚಕರ ಮಾತು ನಂಬಿದ ಮಹಿಳೆ, ಜುಲೈ 22, 2026ರವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹10,50,000 ವರ್ಗಾಯಿಸಿದ್ದಾರೆ.
ಬಳಿಕ ಹೂಡಿಕೆ ಮಾಡಿದ ಹಣ ಹಾಗೂ ಬಂದ ಲಾಭವನ್ನು ಹಿಂಪಡೆಯಲು ಯತ್ನಿಸಿದಾಗ, ವಂಚಕರು “ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಬೇಕು ಹಾಗೂ ತೆರಿಗೆ/ಇತರ ಶುಲ್ಕ ಪಾವತಿಸಬೇಕು” ಎಂದು ಒತ್ತಾಯಿಸಿದ್ದಾರೆ. ಇತ್ತ ಹಣವಿಲ್ಲದೆ ಸ್ವಲ್ಪ ದಿನ ಕಾದ ಮಹಿಳೆ, ಕೊನೆಗೆ ಆಗಸ್ಟ್ 3, 2026ರಂದು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತೆರಳಿ ಪರಿಶೀಲಿಸಿದಾಗ ತಾವು ಆನ್ಲೈನ್ ವಂಚನೆಗೆ ಒಳಗಾಗಿರುವುದು ದೃಢಪಟ್ಟಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.








