ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವಂತಹ ದಾರುಣ ಘಟನೆ ನಡೆದಿದೆ.
ಸೈಫ್ ಮುಲ್ಲಾ (29), ಅವರ ನಾಲ್ಕು ವರ್ಷದ ಪುತ್ರಿ ಸಿಜಾ ಸೈಫ್ ಮುಲ್ಲಾ ಹಾಗೂ ಸ್ನೇಹಿತ ಇಮ್ತಿಯಾಜ್ ಬಡಗಾಂವ್ (35) ಮೃತ ದುರ್ದೈವಿಗಳು. ಹಿಡಕಲ್‌ನಿಂದ ಗೋಕಾಕ್ ಕಡೆಗೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಗೋಕಾಕ್ ಫಾಲ್ಸ್‌ನಿಂದ ಕೊಣ್ಣೂರಿನತ್ತ ಬೈಕ್‌ನಲ್ಲಿ ತಂದೆ, ಮಗಳು ಮತ್ತು ಸ್ನೇಹಿತ ಪ್ರಯಾಣಿಸುತ್ತಿದ್ದರು. ಈ ವೇಳೆ ಕೊಣ್ಣೂರು ಪಟ್ಟಣದ ಕರೆಮ್ಮಾ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತು ಗೋಕಾಕ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








