ನಾಗ್ಪುರ : ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಬಾಡಿಗೆ ಫ್ಲ್ಯಾಟ್‌ನಲ್ಲಿ ಕೂಡಿಹಾಕಿ 2 ದಿನಗಳ ಕಾಲ ಭೀಕರವಾಗಿ ಅತ್ಯಾಚಾರವೆಸಗಿ, ಮಣಿಕಟ್ಟು ಕತ್ತರಿಸಿ ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ನಾಗ್ಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಆನ್‌ಲೈನ್ ಫುಡ್ ಆರ್ಡರ್‌ನ ವಿಳಾಸ ಜಾಡು ಹಿಡಿದು ಹೋದ ಪೊಲೀಸರು, ಕೊಲೆಯಾಗುವ ಹಂತದಲ್ಲಿದ್ದ ಬಾಲಕಿಯನ್ನು ರಕ್ಷಿಸಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರ ಮಗಳಾಗಿದ್ದ 12ನೇ ತರಗತಿಯ ಬಾಲಕಿಗೆ ಇನ್‌ಸ್ಟಾಗ್ರಾಂ ಮತ್ತು ಗೇಮಿಂಗ್ ಆಪ್‌ಗಳ ಮೂಲಕ ಥಾಣೆ ನಿವಾಸಿ, ಬಿಬಿಎ ವಿದ್ಯಾರ್ಥಿ ನಿರ್ಭಯ್ ಅಲಿಯಾಸ್ ಆಕಾಶ್ ಮಾಧವ್ ಪಾಖ್ರೆ (20) ಪರಿಚಯವಾಗಿದ್ದ. ಭಾನುವಾರ ಫ್ರೆಂಡ್‌ಶಿಪ್ ಡೇ ನೆಪದಲ್ಲಿ ಮಾಲ್‌ಗೆ ಹೋಗುವುದಾಗಿ ಹೇಳಿ ಹೊರಟಿದ್ದ ಬಾಲಕಿಯನ್ನು ಆರೋಪಿ ತನ್ನ ಬಾಡಿಗೆ ಫ್ಲ್ಯಾಟ್‌ಗೆ ಕರೆದೊಯ್ದು ಬಂದಿಸಿದ್ದ. ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆಗಿಳಿದ ಪೊಲೀಸರು ಆರೋಪಿಯ ತಾಯಿಗೆ ಕರೆ ಮಾಡಿ ಮಗನಿಗೆ ಕರೆ ಮಾಡಲು ಸೂಚಿಸಿದ್ದರು. ತಾಯಿಯೊಂದಿಗೆ ಪೊಲೀಸ್ ಮಾತನಾಡಿದ್ದನ್ನು ತಿಳಿದು ಗಾಬರಿಗೊಂಡ ಆರೋಪಿ, ಬಾಲಕಿಯಿಂದ ಪೋಷಕರಿಗೆ ಕರೆ ಮಾಡಿಸಿದ್ದ. ಈ ಕಾಲ್ ಟ್ರೇಸ್ ಮಾಡಿದ ಪೊಲೀಸರಿಗೆ ಜಾಗದ ಸುಳಿವು ಸಿಕ್ಕಿತ್ತು. ಇದೇ ವೇಳೆ ಆರೋಪಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದ್ದ! ತಕ್ಷಣವೇ ಎಚ್ಚೆತ್ತ ಪೊಲೀಸರು ಫುಡ್ ಡೆಲಿವರಿ ಬಾಯ್ ಜೊತೆಗೆ ತೆರಳಿ ಫ್ಲ್ಯಾಟ್‌ನ ನಿಖರ ವಿಳಾಸ ಖಚಿತಪಡಿಸಿಕೊಂಡು ಬಾಗಿಲು ಒಡೆದು ಒಳನುಗ್ಗಿದ್ದಾರೆ.
ಪೋಲಿಸರು ಒಳನುಗ್ಗಿದಾಗ ಬಾಲಕಿಯ ಒಂದು ಕೈಯ ಮಣಿಕಟ್ಟು ಕತ್ತರಿಸಲ್ಪಟ್ಟಿತ್ತು. ದೇಹದಾದ್ಯಂತ ಚಾಕುವಿನ ಇರಿತದ ಗಾಯಗಳಿದ್ದು, ಹಾಸಿಗೆಗೆ ಕಟ್ಟಿಹಾಕಲಾಗಿತ್ತು. ಆರೋಪಿ ಆಕೆಯನ್ನು ಕೊಲ್ಲಲು ಚಾಕು ಹಿಡಿದು ಸಿದ್ಧನಾಗಿದ್ದ. “ಮತ್ತಷ್ಟು ತಡವಾಗಿದ್ದರೆ ಬಾಲಕಿ ಕೊಲೆಯಾಗುತ್ತಿದ್ದಳು” ಎಂದು ವಲಯ 4ರ ಡಿಸಿಪಿ ರಶ್ಮಿತಾ ರಾವ್ ತಿಳಿಸಿದ್ದಾರೆ. ಆಕೆಯ ಅಶ್ಲೀಲ ಫೋಟೋ ತೆಗೆದು ಇಡೀ ಕುಟುಂಬವನ್ನು ಕೊಲ್ಲುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ಪ್ರಸ್ತುತ ಪೋಕ್ಸೋ (POCSO), ಅಪಹರಣ, ಅತ್ಯಾಚಾರ ಹಾಗೂ ಕೊಲೆ ಯತ್ನದಡಿ ಆರೋಪಿಯನ್ನು ಬಂಧಿಸಲಾಗಿದೆ. ಆಘಾತದಲ್ಲಿರುವ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ ಆರೋಪಿಯ ವಕೀಲರು ವಿಭಿನ್ನ ವಾದ ಮಂಡಿಸಿದ್ದಾರೆ. ಆರೋಪಿ ಮತ್ತು ಬಾಲಕಿ ಪ್ರೇಮ ಸಂಬಂಧದಲ್ಲಿದ್ದ ಕಾರಣ ಒಟ್ಟಿಗೆ ಇದ್ದರು ಎಂದು ಅವರು ಹೇಳಿದ್ದಾರೆ. ಬಾಲಕಿಯೇ ತನ್ನ ಕೈಗೆ ಗಾಯ ಮಾಡಿಕೊಂಡಿದ್ದಾಳೆ ಎಂದು ವಕೀಲರು ವಾದಿಸಿದ್ದಾರೆ. ಅಲ್ಲದೆ, ಬಾಲಕಿ ತನ್ನ ಸ್ವಂತ ಇಚ್ಛೆಯಿಂದ ಆರೋಪಿಯ ಅಡಗುತಾಣಕ್ಕೆ ತೆರಳಿದ್ದಳು, ಅಪಹರಣದಲ್ಲಿ ಆರೋಪಿಯ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದ್ದಾರೆ.








