ಮುಂಬೈ: ಪ್ರತಿಭಟನೆ ನಡೆಸುವ ಜೆನ್ ಝಿಗಳನ್ನು ದೇಶದ್ರೋಹಿಗಳು ಎಂದು ಕರೆಯಲು ಸಾಧ್ಯವಿಲ್ಲ, ಅವರು ನಮ್ಮದೇ ಮುಂದಿನ ಪೀಳಿಗೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬೈನಲ್ಲಿ Gen Z ಮತ್ತು Gen Alpha ಪೀಳಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, Gen Z ಯುವಕರು ಯಾವುದಾದರೂ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡರೆ, ಅವರು ದೇಶದ್ರೋಹಿಗಳಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ ಎಂದು ತಿಳಿಸಿದರು.
ಸಂವಾದ ನಡೆಯಬೇಕಾದರೆ ಪರಸ್ಪರ ಗೌರವ ಮತ್ತು ಅಪ್ಯಾಯತೆಯ ಭಾವನೆ ಅಗತ್ಯ. ನಾವಿಬ್ಬರೂ ಪರಸ್ಪರ ಗುರುತಿಸಿ ಗೌರವಿಸಿದಾಗ ಮಾತ್ರ ಅರ್ಥಪೂರ್ಣ ಸಂವಾದ ಸಾಧ್ಯ. ಆಗ ಮಾತ್ರ ಅವರ ಕಳವಳಗಳು ನಮಗೆ ಮತ್ತು ನಮ್ಮ ದೃಷ್ಟಿಕೋನ ಅವರಿಗೆ ಅರ್ಥವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಡೆಯಬೇಕಾದದ್ದು ಇದೇ ರೀತಿ ಎಂದರು.
ಇಂದಿನ ಯುವಪೀಳಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈಗಿನ ಯುವಜನತೆ ಹಾಲಿ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಪೀಳಿಗೆ ದೇಶದ ಬಗ್ಗೆ ಪ್ರಾಮಾಣಿಕತೆ, ದೇಶಭಕ್ತಿಯ ಭಾವನೆ ಹಾಗೂ ಸೇವಾ ಮನೋಭಾವವನ್ನು ಹೊಂದಿರಬೇಕು ಎಂದು ಹೇಳಿದರು.








