ನವದೆಹಲಿ: ಇಎಂಐ ಪಾವತಿ ತಡವಾದರೆ ಬ್ಯಾಂಕ್ ಅಥವಾ ರಿಕವರಿ ಏಜೆಂಟ್‌ಗಳು ಗ್ರಾಹಕರಿಗೆ ರಾತ್ರಿ ಕರೆ ಮಾಡೋ ಹಾಗಿಲ್ಲ. ಸಾಲ ವಸೂಲಾತಿ ವೇಳೆ ಗ್ರಾಹಕರಿಗೆ ಕಿರುಕುಳ ಆಗದಂತೆ ಬ್ಯಾಂಕ್‌ಗಳು ಮತ್ತು ನಿಯಂತ್ರಿತ ಸಾಲದಾತರು ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು ಎಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ನಿಯಮ ಜಾರಿಗೊಳಿಸಲಿದೆ. ಈ ನಿಯಮ 2027 ಜನವರಿ 1ರಿಂದ ಜಾರಿಗೆ ಬರಲಿವೆ.
ಹೊಸ ನಿಯಮದ ಪ್ರಕಾರ, ಬ್ಯಾಂಕ್‌ಗಳು ಮತ್ತು ರಿಕವರಿ ಏಜೆಂಟ್‌ಗಳು ಸಾಮಾನ್ಯವಾಗಿ ಬೆಳಗ್ಗೆ 8 ರಿಂದ ಸಂಜೆ 7 ರವರೆಗೆ ಮಾತ್ರ ಸಾಲಗಾರರನ್ನು ಸಂಪರ್ಕಿಸಬೇಕು. ಈ ಸಮಯ ಹೊರತುಪಡಿಸಿ ಕರೆ ಅಥವಾ ಭೇಟಿ ಮಾಡಬೇಕಾದರೆ ಸಾಲಗಾರರ ಮನವಿ ಅಥವಾ ಅನುಮತಿ ಇರಬೇಕು. ಅಷ್ಟೇ ಅಲ್ಲ, ಬೆದರಿಕೆ, ನಿಂದನೀಯ ಮಾತು, ಅವಮಾನ ಮಾಡುವ ರೀತಿಯ ಭಾಷೆ ಬಳಸುವಂತಿಲ್ಲ. ಅನಾಮಧೇಯವಾಗಿ ಕರೆ ಮಾಡಿ ಹೆದರಿಸುವುದು, ಪದೇ ಪದೇ ಕರೆ ಮಾಡುವುದು ಅಥವಾ ಆಸ್ತಿ ಜಪ್ತಿ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವುದಕ್ಕೂ ಅವಕಾಶವಿಲ್ಲ.
ಸಾಲಗಾರರ ಫೋಟೋ, ವಿಡಿಯೋ ಅಥವಾ ವೈಯಕ್ತಿಕ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಅವಮಾನ ಮಾಡುವಂತಿಲ್ಲ. ದುಃಖ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಮದುವೆಯಂತಹ ಸೂಕ್ಷ್ಮ ಸಂದರ್ಭಗಳಲ್ಲಿ ರಿಕವರಿ ಏಜೆಂಟ್‌ಗಳು ಸಾಲಗಾರರನ್ನು ಸಂಪರ್ಕಿಸುವುದನ್ನು ತಪ್ಪಿಸಬೇಕು.
ರಿಕವರಿ ಏಜೆಂಟ್‌ಗಳು ಬೇಕಾಬಿಟ್ಟಿ ಸಾಲಗಾರರ ಮನೆಗೆ ಬರುವಂತಿಲ್ಲ. ಮೊದಲ ಬಾರಿ ವೈಯಕ್ತಿಕವಾಗಿ ಭೇಟಿ ಮಾಡುವ ಮುನ್ನ ಕನಿಷ್ಠ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಬೇಕು. ಏಜೆಂಟ್ ಯಾವ ಸಂಸ್ಥೆಯಿಂದ ಬಂದಿದ್ದಾರೆ ಎಂಬ ವಿವರವನ್ನು ಬ್ಯಾಂಕ್ ನೀಡಬೇಕು. ಜೊತೆಗೆ ಭೇಟಿ ವೇಳೆ ಏಜೆಂಟ್ ತಮ್ಮ ಐಡಿ ಕಾರ್ಡ್, ಅಧಿಕಾರ ಪತ್ರ ಮತ್ತು ಸಂಬಂಧಿತ ನೋಟಿಸ್ ಹೊಂದಿರಬೇಕು. ಅದರಲ್ಲೂ ಬ್ಯಾಂಕ್ ಹಾಗೂ ರಿಕವರಿ ಏಜೆನ್ಸಿಯ ದೂರು ಅಧಿಕಾರಿಯ ಸಂಪರ್ಕ ವಿವರ ಇರಬೇಕು.
ಇನ್ನು ಮುಂದೆ ಸಾಲ ವಸೂಲಾತಿ ವೇಳೆ ನಡೆದ ಕರೆಗಳನ್ನೂ ಬ್ಯಾಂಕ್‌ಗಳು ದಾಖಲಿಸಬೇಕು. ಕರೆ ಮಾಡಿದ ಸಮಯ ಮತ್ತು ಎಷ್ಟು ಬಾರಿ ಕರೆ ಮಾಡಲಾಗಿದೆ ಎಂಬ ವಿವರಗಳನ್ನು ನಿರ್ವಹಿಸಬೇಕು. ಈ ದಾಖಲೆಗಳನ್ನು ಸಾಮಾನ್ಯವಾಗಿ ಕನಿಷ್ಠ 6 ತಿಂಗಳವರೆಗೆ ಸಂರಕ್ಷಿಸಬೇಕು. ಏಜೆಂಟ್‌ಗಳ ನಡೆ-ನುಡಿಯನ್ನು ಬ್ಯಾಂಕ್‌ಗಳು ಮೇಲ್ವಿಚಾರಣೆ ಮಾಡಬೇಕು. ರಿಕವರಿ ಏಜೆಂಟ್‌ಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಆರ್‌ಬಿಐ ಸೂಚಿಸಿದೆ.








