ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಪ್ರಿನ್ಸ್ ಡೇವಿಡ್ ಡಿಸೋಜಾ ಅವರ ಮೇಲೆ ನಡೆದ ಭೀಕರ ಗುಂಡಿನ ದಾಳಿ ಇದೀಗ ಕೊಲೆ ಪ್ರಕರಣವಾಗಿ ತನಿಖೆಯ ಹಾದಿ ಹಿಡಿದಿದೆ. ಹಾಡಹಗಲೇ ನಡೆದ ಈ ಶೂಟೌಟ್ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪ್ರಕರಣದ ಹಿಂದೆ ಇರುವ ನಿಖರ ಕಾರಣ ಮತ್ತು ಆರೋಪಿಗಳ ಜಾಲದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುಪಿ ಮೂಲದ ಶೂಟರ್ ರಾಜು ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಪ್ರಕರಣದ ಹಿಂದೆ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇದೇ ವೇಳೆ ಡೇವಿಡ್ ಡಿಸೋಜಾ ಹತ್ಯೆಯ ಹಿಂದೆ ಮುಂಬೈ ಮೂಲದ ಶೂಟರ್‌ಗಳ ಕೈವಾಡವಿದೆಯೇ ಎಂಬ ಅನುಮಾನವೂ ತನಿಖೆಯ ಪ್ರಮುಖ ಅಂಶವಾಗಿದೆ.
ಪಡುಬಿದ್ರೆ ಪವರ್ ಪ್ರಾಜೆಕ್ಟ್‌ನ ಟೆಂಡರ್ ವಿಚಾರವೂ ಪ್ರಕರಣದ ಹಿಂದಿನ ಪ್ರಮುಖ ಕಾರಣವಾಗಿರಬಹುದೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಡೇವಿಡ್ ಡಿಸೋಜಾ ಅವರು ಈ ಭಾಗದ ರಾಜಕೀಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಪರಿಚಿತರಾಗಿದ್ದು, ಈ ಹಿಂದೆ ಪವರ್ ಪ್ರಾಜೆಕ್ಟ್‌ಗೆ ಸಂಬಂಧಿಸಿದ ವಿಚಾರಗಳಲ್ಲೂ ಅವರ ಹೆಸರು ಕೇಳಿಬಂದಿತ್ತು.
ಇದೀಗ ಡೇವಿಡ್ ಡಿಸೋಜಾ ಅವರ ಹತ್ಯೆಗೆ ಕಾರಣವೇನು, ಶೂಟರ್ ರಾಜುವಿನೊಂದಿಗೆ ಇನ್ನಾರಾದರೂ ಸಂಪರ್ಕ ಹೊಂದಿದ್ದಾರೆಯೇ, ಮುಂಬೈ ಮೂಲದ ಶೂಟರ್‌ಗಳ ಪಾತ್ರವಿದೆಯೇ ಹಾಗೂ ಟೆಂಡರ್ ವಿಚಾರಕ್ಕೂ ಕೊಲೆಗೂ ಯಾವುದೇ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದ್ದು, ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕವೇ ಹತ್ಯೆಯ ಹಿಂದಿನ ನಿಖರ ಕಾರಣ ಮತ್ತು ಇತರ ಆರೋಪಿಗಳ ಪಾತ್ರದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.








