ಮಂಗಳೂರು: ರಸ್ತೆಯಲ್ಲಿ ಬಿದ್ದಿರುವ ಬೃಹತ್ ಗುಂಡಿ ಹಾಗೂ ಅದರಲ್ಲಿ ನಿಂತಿರುವ ಕೆಸರು ನೀರಿಗೆ ಆಡಳಿತದ ಗಮನ ಸೆಳೆಯಲು ಯುವಕರ ಗುಂಪೊಂದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ರಸ್ತೆಯ ಸ್ಥಿತಿ ಶೋಚನೀಯವಾಗಿದ್ದು, ಮಳೆಯಿಂದಾಗಿ ರಸ್ತೆ ಗುಂಡಿಗಳಲ್ಲಿ ನೀರು ನಿಂತು ಕೆರೆಯಂತಾಗಿದೆ. ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳದಿರುವುದನ್ನು ಖಂಡಿಸಿ, ಸ್ಥಳೀಯ ಯುವಕರು ಈ ರಸ್ತೆ ಗುಂಡಿಯನ್ನೇ ಅಂಗಳವನ್ನಾಗಿ ಮಾಡಿಕೊಂಡು ‘ಕೆರೆ-ದಂಡೆ’ ಆಟವಾಡುವ ಮೂಲಕ ತಮ್ಮ ಆಕ್ರೋಶ ಹಾಗೂ ವಿಡಂಬನಾತ್ಮಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಕೆಸರು ನೀರಿನಿಂದ ತುಂಬಿದ್ದ ಬೃಹತ್ ಗುಂಡಿಯ ಸುತ್ತ ನಿಂತ ಯುವಕರು ‘ಕೆರೆ’ ಅಂದ ತಕ್ಷಣ ನೀರಿಗೆ ಜಿಗಿಯುವುದು, ‘ದಂಡೆ’ ಅಂದ ತಕ್ಷಣ ಹೊರಗೆ ಬರುವ ಆಟವಾಡಿ ಸಾರ್ವಜನಿಕರ ಗಮನ ಸೆಳೆದರು. ಯುವಕರ ಈ ವಿಶಿಷ್ಟ ಆಟದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರತಿದಿನ ಸಂಚರಿಸುವ ವಾಹನ ಸವಾರರು ಹಾಗೂ ಹಾದಿಹೋಕರು ತೊಂದರೆ ಅನುಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದು ಮಂಗಳೂರು – ಕೇರಳದ ರಸ್ತೆ ಎಂದು ಹೇಳಲಾಗಿದೆ.








