ಉಳ್ಳಾಲ: ಮದ್ಯದ ಅಮಲಿನಲ್ಲಿ ತಲವಾರು ಪ್ರದರ್ಶಿಸುತ್ತಾ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ರೌಡಿಶೀಟರ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಉಳ್ಳಾಲದ ಮಾರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ (31) ಹಾಗೂ ಮಂಚಿಲ ನಿವಾಸಿ ಅಶ್ಪಕ್ (28) ಬಂಧಿತ ಆರೋಪಿಗಳು. ಬಂಧಿತರಲ್ಲಿ ಮೊಹಮ್ಮದ್ ಶಾಕಿರ್ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದರೆ, ಅಶ್ಪಕ್ ಆಟೋ ಚಾಲಕನಾಗಿದ್ದಾನೆ. ಅಶ್ಪಕ್ ವಿರುದ್ಧ ಈಗಾಗಲೇ ಪೊಲೀಸರು ರೌಡಿ ಶೀಟ್ ತೆರೆದಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ತಡರಾತ್ರಿ ಸುಮಾರು 12.15ರ ಸುಮಾರಿಗೆ ತೊಕ್ಕೊಟ್ಟಿನ ಬಾರ್ ಒಂದರ ಸಮೀಪ ಮದ್ಯದ ಅಮಲಿನಲ್ಲಿದ್ದ ಆರೋಪಿಗಳು ಸಾರ್ವಜನಿಕವಾಗಿ ತಲವಾರು ಹಿಡಿದು ಓಡಾಡುತ್ತಾ, ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಬೆದರಿಕೆ ಒಡ್ಡುತ್ತಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಾಚರಣೆಗೆ ಇಳಿದ ಉಳ್ಳಾಲ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಸಾರ್ವಜನಿಕ ಶಾಂತಿ ಭಂಗದ ವಿವಿಧ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.








