ತಮಿಳುನಾಡು: ತಮಿಳುನಾಡಿನ ಪ್ರಮುಖ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 1ರಿಂದ ಪ್ರಸಿದ್ಧ ದೇವಸ್ಥಾನಗಳ ಒಳಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ಸಚಿವ ಎಸ್. ರಮೇಶ್ ತಿಳಿಸಿದ್ದಾರೆ.
ತಿರುಚಿಯ ಶ್ರೀರಂಗಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭಕ್ತರು ದೇವಸ್ಥಾನ ಪ್ರವೇಶಿಸುವ ಮುನ್ನ ತಮ್ಮ ಮೊಬೈಲ್ ಫೋನ್ಗಳನ್ನು ಸುರಕ್ಷಿತವಾಗಿ ಇಡಲು ಪ್ರವೇಶ ದ್ವಾರ ಅಥವಾ ದೇವಸ್ಥಾನದ ಹೊರಭಾಗದಲ್ಲಿ ಪ್ರತ್ಯೇಕ ಡೆಪಾಸಿಟ್ ಕೌಂಟರ್ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ಗರ್ಭಗುಡಿ ಹಾಗೂ ವಿವಿಧ ಪೂಜಾ ಕೈಂಕರ್ಯಗಳ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ, ದೇವಸ್ಥಾನದ ಆವರಣದಲ್ಲೇ ರೀಲ್ಸ್ ಮತ್ತು ಶಾರ್ಟ್ಸ್ ವಿಡಿಯೋಗಳನ್ನು ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ದೇವಸ್ಥಾನಗಳ ಪಾವಿತ್ರ್ಯ ಮತ್ತು ಧಾರ್ಮಿಕ ವಾತಾವರಣವನ್ನು ಕಾಪಾಡುವುದು, ಅನಧಿಕೃತ ಚಿತ್ರೀಕರಣಕ್ಕೆ ಕಡಿವಾಣ ಹಾಕುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಮೊಬೈಲ್ ಫೋನ್ಗಳನ್ನು ಸುರಕ್ಷಿತವಾಗಿ ಇರಿಸಲು ಪ್ರತ್ಯೇಕ ಡೆಪಾಸಿಟ್ ಕೌಂಟರ್ಗಳನ್ನು ತೆರೆಯಲಾಗುತ್ತದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಮೊಬೈಲ್ ಸುರಕ್ಷಿತವಾಗಿ ಇರಿಸುವ ಸೇವೆಗೆ ಪ್ರತಿ ಫೋನ್ಗೆ 5 ರೂ. ಶುಲ್ಕ ವಿಧಿಸುವ ಸಾಧ್ಯತೆಯಿದೆ. ಮೊಬೈಲ್ ನಿಷೇಧದ ನಿಯಮದಿಂದ ವಿಐಪಿ, ರಾಜಕಾರಣಿಗಳು, ಚಲನಚಿತ್ರ ನಟರು ಸೇರಿದಂತೆ ಗಣ್ಯರಿಗೂ ವಿನಾಯಿತಿ ಇರುವುದಿಲ್ಲ ಎಂದು ತಿಳಿಸಲಾಗಿದೆ. ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡುವ ಕನಿಷ್ಠ ಒಂದು ದಿನ ಮುಂಚಿತವಾಗಿ HR&CE ಆಯುಕ್ತರಿಗೆ ಮಾಹಿತಿ ನೀಡಬೇಕು. ಭೇಟಿಯ ಸಮಯ ಹಾಗೂ ಅವರೊಂದಿಗೆ ಆಗಮಿಸುವವರ ಸಂಖ್ಯೆಯನ್ನೂ ಮುಂಚಿತವಾಗಿ ತಿಳಿಸಬೇಕಾಗುತ್ತದೆ. ತುರ್ತು VIP ಭೇಟಿಗಳ ಸಂದರ್ಭದಲ್ಲಿಯೂ ಸಾಮಾನ್ಯ ಭಕ್ತರ ದರ್ಶನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೆ, VIP ಭೇಟಿಗಳ ಸಂದರ್ಭದಲ್ಲೂ ದೇವಸ್ಥಾನದ ಒಳಗೆ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿರುವ ಈ ನಿಯಮ ದೇವಸ್ಥಾನಗಳ ಪಾವಿತ್ರ್ಯ ಕಾಪಾಡುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ.








