ಕಾಪು: ಎಲ್ಲೂರಿನ ರೇವತಿ ಕುಂದರ್ ಅವರಿಗೆ ಸೇರಿದ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಹೆಂಚಿನ ಮೇಲ್ಛಾವಣಿಯ ಮರದ ತೊಲೆಗಳು ಮುರಿದು ನೇರವಾಗಿ ರೇವತಿ ಅವರು ಮಲಗಿದ್ದ ಕೊಠಡಿಗೆ ಕುಸಿದು ಬಿದ್ದಿವೆ. ಘಟನೆಯಲ್ಲಿ ರೇವತಿ ಅವರು ಪವಾಡಸದೃಶವಾಗಿ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಮನೆಯ ಇತರ ಕೊಠಡಿಗಳಲ್ಲಿ ಮಲಗಿದ್ದ ಕುಟುಂಬದ ಸದಸ್ಯರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಮೇಲ್ಛಾವಣಿ ಕುಸಿದ ಪರಿಣಾಮ ಮನೆಯ ಸುಮಾರು ಶೇ.75ರಷ್ಟು ಭಾಗ ಸಂಪೂರ್ಣ ಹಾನಿಗೊಳಗಾಗಿದೆ. ಒಟ್ಟು ಸುಮಾರು 3 ಲಕ್ಷ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಘಟನೆಯ ಬಳಿಕ ಎಲ್ಲೂರು ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಪ್ರಮಾಣವನ್ನು ಅಂದಾಜಿಸಿದ್ದಾರೆ.








