ಬೆಳಗಾವಿ : ಗೋಕಾಕ್ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ (ತ್ರಿವಳಿ) ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ. ವೈದ್ಯರ ಸಮಯೋಚಿತ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಯಿಂದಾಗಿ ತಾಯಿ ಮತ್ತು ಮೂವರು ನವಜಾತ ಶಿಶುಗಳು ಸುರಕ್ಷಿತವಾಗಿದ್ದಾರೆ.
ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ 20 ವರ್ಷದ ರೇಣುಕಾ ರವಿ ಗಣಾಚಾರಿ ಎಂಬವರೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಇವರಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಜನಿಸಿದೆ. ಸೋಮವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ರೇಣುಕಾ ಅವರನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಶ್ವೇತಾ ನಾಯಿಕ ಅವರ ನೇತೃತ್ವದಲ್ಲಿ ವೈದ್ಯರಾದ ಡಾ. ಪವಿತ್ರಾ ದಂಡಿನ, ಡಾ. ಪ್ರಿಯಾ ಪೂಜಾರಿ ಹಾಗೂ ಅರವಳಿಕೆ ತಜ್ಞ ಡಾ. ಅಮಿತ್ ಸಾಥ್ ಅವರಿದ್ದ ತಂಡ ಸಿಜೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ. “ಗರ್ಭಿಣಿಯಾದ ಒಂದೂವರೆ ತಿಂಗಳಿನಲ್ಲೇ ಗರ್ಭದಲ್ಲಿ ಮೂವರು ಶಿಶುಗಳಿರುವುದು ತಿಳಿದುಬಂದಿತ್ತು. ಆರಂಭದಲ್ಲಿ ತಾಯಿ ಗಾಬರಿಯಾಗಿದ್ದರೂ, ನಿಯಮಿತ ತಪಾಸಣೆ, ಸೂಕ್ತ ಆಹಾರ ಮತ್ತು ಧೈರ್ಯ ತುಂಬುವ ಮೂಲಕ 32 ವಾರ 3 ದಿನಗಳಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ” ಎಂದು ಡಾ. ಶ್ವೇತಾ ನಾಯಿಕ ತಿಳಿಸಿದ್ದಾರೆ.
ನವಜಾತ ಶಿಶುಗಳು ಕ್ರಮವಾಗಿ 1.6 ಕೆಜಿ, 1.4 ಕೆಜಿ ಹಾಗೂ 1.5 ಕೆಜಿ ತೂಕ ಹೊಂದಿದ್ದು, ಅವಧಿಪೂರ್ವ ಜನಿಸಿರುವುದರಿಂದ ತೀವ್ರ ನಿಗಾ ಘಟಕದಲ್ಲಿ (NICU) ಇರಿಸಲಾಗಿದೆ. ತಾಯಿ ರೇಣುಕಾ ಚೇತರಿಸಿಕೊಳ್ಳುತ್ತಿದ್ದು, ವಾರ್ಡ್‌ನಲ್ಲಿ ಆರೈಕೆ ಪಡೆಯುತ್ತಿದ್ದಾರೆ.








