ಮಂಗಳೂರು: ಸಾರ್ವಜನಿಕರಿಂದ ಲಂಚ ಪಡೆದು ಕೆಲಸ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಹಾಗೂ ಮೂಡುಬಿದಿರೆ ತಾಲೂಕು ಕಚೇರಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಮಂಗಳೂರು, ಉಡುಪಿ ಹಾಗೂ ಕಾರವಾರ ಲೋಕಾಯುಕ್ತ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕು ಕಚೇರಿಯ ಕಂದಾಯ ವಿಭಾಗದಲ್ಲೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸಾರ್ವಜನಿಕರಿಂದ ಲಂಚ ಸ್ವೀಕರಿಸಿ ಕೆಲಸ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದೆ.
ಮಂಗಳೂರು ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ಏಳು ಅಧಿಕಾರಿಗಳ ತಂಡ ಬೆಳ್ತಂಗಡಿ ತಾಲೂಕು ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದೆ. ಲಂಚದ ಆರೋಪಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಅಧಿಕಾರಿಗಳು ಸಂಗ್ರಹಿಸಿದ್ದಾರೆ.








