ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಇದರ ನಡುವೆಯೇ, ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ, ನಟಿ ರಿಷಿಕಾ ಸಿಂಗ್ ಅವರು ‘ಟಾಕ್ಸಿಕ್’ ಟ್ರೇಲರ್ ಹಾಗೂ ನಟ ಯಶ್ ವಿರುದ್ಧ ತೀವ್ರವಾಗಿ ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿದ ರಿಷಿಕಾ ಸಿಂಗ್, “ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕೆಂಬ ಆಸೆ ನನಗೂ ಇದೆ. ಬಾಲಿವುಡ್‌ನಿಂದ ಕಿಯಾರಾ ಅಡ್ವಾಣಿ ಅವರಂತಹ ನಟಿಯರು ನಟಿಸಿರುವುದಕ್ಕೆ ಖುಷಿಯಿದೆ. ಆದರೆ, ಟ್ರೇಲರ್‌ನಲ್ಲಿ ನಟಿಯರನ್ನು ತೋರಿಸಿರುವ ರೀತಿ ತೀರಾ ಕಳಪೆಯಾಗಿದೆ. ಐದು ಜನ ಹೀರೋಯಿನ್‌ಗಳಿದ್ದರೂ ಒಬ್ಬರನ್ನೂ ಸುಂದರವಾಗಿ ಗೌರವಿಸುವ ರೀತಿಯಲ್ಲಿ ತೋರಿಸಿಲ್ಲ. ಪುರುಷರ ಅಹಂಕಾರವನ್ನು ತೋರಿಸಲು ಈ ಸಿನಿಮಾ ಮಾಡಿದ್ದೀರಾ? ಕಿಯಾರಾ ಅವರಂತಹ ನಟಿಯರನ್ನು ಕರೆಸಿ ‘ನಿನ್ನ ರೇಟ್ ಎಷ್ಟು’ ಎಂದು ಕೇಳುವ ಡೈಲಾಗ್ ಇಡಲಾಗಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
“ಸಿನಿಮಾದ ನಿರ್ದೇಶಕಿ (ಗೀತು ಮೋಹನ್‌ದಾಸ್) ಹೊರಗಿನವರು, ಅವರಿಗೆ ನಮ್ಮ ಸಂಸ್ಕೃತಿ ಗೊತ್ತಿಲ್ಲದಿರಬಹುದು. ಆದರೆ ನಮ್ಮವರೇ ಆದ ಯಶ್ ಅವರಿಗೆ ಎಲ್ಲೋಗಿತ್ತು ಬುದ್ಧಿ?” ಎಂದು ಸವಾಲೆಸೆದಿರುವ ರಿಷಿಕಾ, ಯಶ್ ಅವರಿಗೆ ಕಾವ್ಯರೂಪದ ಖಡಕ್ ಸಾಲುಗಳ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ. “ಹೆಣ್ಣುಮಕ್ಕಳಿಗೆ ಗೌರವ ಕೊಡಿ, ಇಲ್ಲದಿದ್ದರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸಿಬಿಡುತ್ತೇವೆ” ಎಂದು ಹೇಳಿದ್ದಾರೆ.
ರಿಷಿಕಾ ಅವರ ಈ ವಿಡಿಯೋ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. “ಚಿತ್ರದಲ್ಲಿ ನಟಿಸಿರುವ ನಟಿಯರೇ ಯಶ್ ಅವರ ವೃತ್ತಿಪರತೆ ಹಾಗೂ ಜೊತೆಗೆ ಕೆಲಸ ಮಾಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗಿರುವಾಗ ಒಬ್ಬ ಪ್ರೇಕ್ಷಕಿಯಾಗಿ ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡದೆ, ಕೇವಲ ಪಬ್ಲಿಸಿಟಿಗಾಗಿ ರಿಷಿಕಾ ಈ ರೀತಿ ಮಾತನಾಡುತ್ತಿದ್ದಾರೆ” ಎಂದು ಅಭಿಮಾನಿಗಳು ಕಮೆಂಟ್ ಮಾಡಿ ತಿರುಗೇಟು ನೀಡುತ್ತಿದ್ದಾರೆ.








