ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪ್ರಮುಖ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೃತ್ಯಕ್ಕೆ ಹಣಕಾಸಿನ ನೆರವು ಹಾಗೂ ವರ್ಗಾವಣೆಗೆ ಸಹಕರಿಸಿದ್ದ ಮತ್ತಿಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಎರ್ಮಾಳು ತೆಂಕ ಪಂಚಾಯತ್ ಕಚೇರಿ ಬಳಿಯ ನಿವಾಸಿಗಳಾದ ಚಿರಾಗ್ ಪೂಜಾರಿ (26) ಹಾಗೂ ಮೊಹಮ್ಮದ್ ಇರ್ಷಾದ್ (43) ಬಂಧಿತ ಆರೋಪಿಗಳು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಸುದೀರ್ಘ ತನಿಖೆಯ ವೇಳೆ, ಶೂಟೌಟ್ ಕೃತ್ಯವನ್ನು ಎಸಗಲು ಅಗತ್ಯವಿದ್ದ ಹಣವನ್ನು ವರ್ಗಾವಣೆ ಮಾಡಲು ಹಾಗೂ ಆರೋಪಿಗಳಿಗೆ ಆರ್ಥಿಕ ನೆರವು ನೀಡಲು ಚಿರಾಗ್ ಪೂಜಾರಿ ಮತ್ತು ಮೊಹಮ್ಮದ್ ಇರ್ಷಾದ್ ಸಹಾಯ ಮಾಡಿರುವುದು ಸಾಕ್ಷ್ಯಾಧಾರಗಳ ಸಹಿತ ದೃಢಪಟ್ಟಿದೆ.
ಅದರಂತೆ ಅಗಸ್ಟ್ 12ರಂದು ಇಬ್ಬರನ್ನೂ ಬಂಧಿಸಲಾಗಿದ್ದು, ಈ ಹೈಪ್ರೊಫೈಲ್ ಶೂಟೌಟ್ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ ಇದೀಗ ಐದಕ್ಕೇರಿದೆ. ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.








