ಕೋಲ್ಕತ್ತಾ : ಚಾಲನೆ ಅಭ್ಯಾಸ ಮಾಡುತ್ತಿದ್ದಾಗ ಕಾರಿನ ನಿಯಂತ್ರಣ ತಪ್ಪಿ ಕೊಳಕ್ಕೆ ಉರುಳಿ 42 ವರ್ಷದ ಮಹಿಳೆಯೊಬ್ಬರು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲ್ಕತ್ತಾದ ಕೆಸ್ತೋಪುರದ ಪ್ರಫುಲ್ಲ ಕಾನನ್ (ಪಶ್ಚಿಮ) ಪ್ರದೇಶದಲ್ಲಿ ಬುಧವಾರ ನಡೆದಿದೆ. ಮೃತರನ್ನು ಕೆಸ್ತೋಪುರ ನಿವಾಸಿ ಸುಮಿತ್ರಾ ದಾಸ್ (42) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಿಗ್ಗೆ ಸುಮಿತ್ರಾ ಅವರು ತಮ್ಮ ಮಗಳನ್ನು ಸ್ಕೂಟರ್ನಲ್ಲಿ ಶಾಲೆಗೆ ಬಿಟ್ಟು ಮನೆಗೆ ಮರಳಿದ್ದರು. ಬಳಿಕ ಸ್ಕೂಟರ್ ನಿಲ್ಲಿಸಿ, ಗ್ಯಾರೇಜ್ನಲ್ಲಿದ್ದ ಹುಂಡೈ ಇಯಾನ್ ಕಾರನ್ನು ಹೊರತೆಗೆದು ಚಾಲನೆ ಅಭ್ಯಾಸ ಮಾಡಲು ಹೊರಟಿದ್ದರು. ಈ ವೇಳೆ ಆಕಸ್ಮಿಕವಾಗಿ ಬ್ರೇಕ್ ತುಳಿಯುವ ಬದಲು ಆಕ್ಸಿಲರೇಟರ್ ಒತ್ತಿದ್ದರಿಂದ, ಕಾರು ವೇಗವಾಗಿ ನಿಯಂತ್ರಣ ತಪ್ಪಿ ಸಮೀಪದ ಕೊಳದ ಮಧ್ಯಭಾಗಕ್ಕೆ ಉರುಳಿದೆ. ಕಾರು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದರಿಂದ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಸುಮಿತ್ರಾ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ರಕ್ಷಣಾ ಕಾರ್ಯಾಚರಣೆ ನಡೆಸಿ ಕಾರನ್ನು ನೀರಿನಿಂದ ಹೊರತೆಗೆದರು.








