ಬೆಂಗಳೂರು: ಖಾಸಗಿ ಐಷಾರಾಮಿ ಹೋಟೆಲ್‌ಗಳು ಹಾಗೂ ಪಬ್‌ಗಳ ಬಳಿಕ ಇದೀಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿರುವ ಕ್ಯಾಂಟೀನ್‌ಗಳು ಹಾಗೂ ಆಹಾರ ಮಳಿಗೆಗಳ ಮೇಲೂ ದಿಢೀರ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು, ಅಸ್ವಚ್ಛತೆ ಹಾಗೂ ಆಹಾರದಲ್ಲಿ ಜಿರಳೆ ಪತ್ತೆಯಾಗಿವೆ.
ಆಗಸ್ಟ್ 12ರಂದು ಆರೋಗ್ಯ ಸೌಧ, ವಿಧಾನಸೌಧ, ಶಾಸಕರ ಭವನ, ವಿಕಾಸಸೌಧ ಹಾಗೂ ಎಂ.ಎಸ್. ಕಟ್ಟಡದಲ್ಲಿರುವ ಹೋಟೆಲ್‌ಗಳು ಮತ್ತು ಆಹಾರ ಮಳಿಗೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆಹಾರದ ಗುಣಮಟ್ಟ, ಲೇಬಲಿಂಗ್, ಸಂಗ್ರಹಣೆ, ಸ್ವಚ್ಛತೆ ಹಾಗೂ ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಲಾಯಿತು.
ವಿಕಾಸಸೌಧ ಆವರಣದ ಕ್ಯಾಂಟೀನ್‌ವೊಂದರಲ್ಲಿ 500 ಗ್ರಾಂ ಅವಧಿ ಮೀರಿದ ರವಾ ಹಾಗೂ 500 ಗ್ರಾಂ ಅವಧಿ ಮೀರಿದ ಕೊಕೊಕಾಂಟ್ ಪೌಡರ್ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ಯಾಂಟೀನ್‌ನಲ್ಲಿ ಅಸ್ವಚ್ಛ ಪರಿಸ್ಥಿತಿಯೂ ಕಂಡುಬಂದಿದೆ.
ಇದೇ ವೇಳೆ, ಮಲ್ಲಿಗೆ ಹೋಟೆಲ್‌ನಲ್ಲಿ ಆಹಾರದಲ್ಲಿ ಜಿರಳೆಗಳು ಪತ್ತೆಯಾಗಿದ್ದು, ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಮತ್ತೊಂದು ಹೋಟೆಲ್‌ನಲ್ಲೂ ಅಸ್ವಚ್ಛ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ಸಲಹಾ ನೋಟಿಸ್ ನೀಡಲಾಗಿದೆ.
ಎಂ.ಎಸ್. ಕಟ್ಟಡದಲ್ಲಿರುವ ಮತ್ತೊಂದು ಹೋಟೆಲ್‌ನಲ್ಲಿ ಅಸ್ವಚ್ಛ ಪರಿಸ್ಥಿತಿಯಲ್ಲಿ ಆಹಾರ ತಯಾರಿಕೆ ಹಾಗೂ ವಹಿವಾಟು ನಡೆಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಹೋಟೆಲ್‌ನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಇದಕ್ಕೂ ಮುನ್ನ ಜೊಮ್ಯಾಟೋದ ಹೈಪರ್‌ಪ್ಯೂರ್ ಗೋದಾಮಿನಲ್ಲೂ ತಪಾಸಣೆ ನಡೆಸಲಾಗಿದ್ದು, ಸುರಕ್ಷತಾ ಮಾನದಂಡ ಪಾಲಿಸದ 146 ಕೆ.ಜಿ. ಕೋಳಿ ಮಾಂಸ, ತಪ್ಪಾದ ಲೇಬಲಿಂಗ್ ಹೊಂದಿದ್ದ ಅಕ್ಕಿ, ಡ್ರೈಫ್ರೂಟ್ಸ್ ಹಾಗೂ ಮಸಾಲೆ ಪದಾರ್ಥಗಳು ಪತ್ತೆಯಾಗಿದ್ದವು.








