ಉತ್ತರಾಖಂಡ : ಪಿಪಲ್ಕೋಟಿ ಸಮೀಪದ ಮಾಯಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC)ನ ಸುರಂಗದೊಳಗೆ ಭಾರಿ ಭೂಕುಸಿತ ಸಂಭವಿಸಿ, ನೀರು ನುಗ್ಗಿದ ಪರಿಣಾಮ ಕನಿಷ್ಠ ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಅಲಕನಂದಾ ನದಿಯ ಮೇಲಿನ ವಿಷ್ಣುಗಾಡ್-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಟೇಲ್ ರೇಸ್ ಟನಲ್‌ನಲ್ಲಿ (TRT) ಗುರುವಾರ ಸಾಯಂಕಾಲ ಈ ದುರಂತ ಸಂಭವಿಸಿದೆ. ಕಾರ್ಮಿಕರು ಸುರಂಗದೊಳಗೆ ಬಲವರ್ಧಕ ಕಬ್ಬಿಣದ ಸರಳುಗಳನ್ನು ವೆಲ್ಡಿಂಗ್ ಮಾಡುತ್ತಿದ್ದ ವೇಳೆಯಲ್ಲಿ ದಿಢೀರ್ ಭೂಕುಸಿತ ಉಂಟಾಗಿ ಭಾರಿ ಪ್ರಮಾಣದ ಅವಶೇಷಗಳು ಮತ್ತು ನೀರು ನುಗ್ಗಿದೆ.
ಅಪಘಾತ ಸಂಭವಿಸಿದಾಗ ಸುರಂಗದಲ್ಲಿದ್ದ 28 ಕಾರ್ಮಿಕರ ಪೈಕಿ ರಕ್ಷಣಾ ಪಡೆಗಳು ಇದುವರೆಗೆ 22 ಮಂದಿಯನ್ನು ಹೊರತೆಗೆದಿವೆ. ಅವರಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು, ರಕ್ಷಿಸಲ್ಪಟ್ಟ 11 ಮಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಇತರರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುರಂಗದೊಳಗೆ ಇನ್ನೂ ಸಿಲುಕಿರುವ ಆರು ಕಾರ್ಮಿಕರನ್ನು ಪತ್ತೆಹಚ್ಚಲು ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸೂಚಿಸಿದ್ದು, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಕರೆ ಮಾಡಿ ಸಂತ್ರಸ್ತ ಕಾರ್ಮಿಕರ ಮಾಹಿತಿ ಹಂಚಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಂಪೂರ್ಣ ವೈದ್ಯಕೀಯ ಹಾಗೂ ತುರ್ತು ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.








