ಲಕ್ನೋ : ಸಂಬಂಧಗಳಿಗೆ ಕಳಂಕ ತರುವಂತಹ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಲಕ್ನೋದ ರಹೀಮಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ತಂದೆ ಮೃತಪಟ್ಟ ಕೆಲವೇ ಕ್ಷಣಗಳಲ್ಲಿ, ಅಂತ್ಯಕ್ರಿಯೆಗೂ ಮುನ್ನವೇ ಮೃತ ದೇಹದ ಬೆರಳಚ್ಚು ಖಾಲಿ ಕಾಗದಗಳ ಮೇಲೆ ಪಡೆದು ಬರೋಬ್ಬರಿ ₹3 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಮಗನೊಬ್ಬ ಯತ್ನಿಸಿದ್ದಾನೆ. ಜುಲೈ 9 ರಂದು ನಡೆದ ಈ ಕೃತ್ಯದ ವೀಡಿಯೊವನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಹೀಮಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಖರೌಹಾ ಗ್ರಾಮದ 75 ವರ್ಷದ ಛತ್ರಪಾಲ್ ಎಂಬುವವರೇ ಮೃತ ದುರ್ದೈವಿ. ಛತ್ರಪಾಲ್ ಮತ್ತು ಅವರ ಪತ್ನಿ ಶಿವದೇವಿ ಅವರ ಮೇಲೆ ಮಗ ಮಹೇಂದ್ರ ಹಾಗೂ ಸೊಸೆ ಲಕ್ಷ್ಮಿ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದರು. 2023ರಲ್ಲಿ ಹೆತ್ತವರನ್ನು ಮನೆಯಿಂದ ಹೊರಹಾಕಿದ್ದರಿಂದ, ನೊಂದ ಛತ್ರಪಾಲ್ ಅವರು ತಮ್ಮ ಹಿರಿಯ ಮಗಳು ಸುಮನ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲದೆ, ಮಗನನ್ನು ಆಸ್ತಿಯಿಂದ ಹಕ್ಕುಚ್ಯುತಿಗೊಳಿಸಿ, ತಮ್ಮ ಆರುವರೆ ಬಿಘಾ ಜಮೀನಿನಲ್ಲಿ ಒಂದು ಬಿಘಾವನ್ನು ಮೂವರು ಹೆಣ್ಣುಮಕ್ಕಳಿಗೆ ನೀಡಲು ನಿರ್ಧರಿಸಿದ್ದರು.
ಜುಲೈ 7 ರಂದು ಛತ್ರಪಾಲ್ ಅವರ ಆರೋಗ್ಯ ಹದಗೆಟ್ಟಾಗ, ಉತ್ತಮ ಚಿಕಿತ್ಸೆಯ ನೆಪದಲ್ಲಿ ಮಗ ಮಹೇಂದ್ರ ಅವರನ್ನು ತನ್ನೊಂದಿಗೆ ಕರೆದೊಯ್ದಿದ್ದನು. ಆದರೆ, ಕೇವಲ ಮೂರೇ ದಿನಗಳಲ್ಲಿ ಅಂದರೆ ಜುಲೈ 9 ರಂದು ಛತ್ರಪಾಲ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅಂತ್ಯಕ್ರಿಯೆಯ ವೇಳೆಯಲ್ಲಿಯೂ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದ ಆರೋಪಿ ಮಗ ಮಹೇಂದ್ರ, ತನ್ನ ಸೋದರಸಂಬಂಧಿಯ ಸಹಾಯದಿಂದ ₹3 ಕೋಟಿ ಮೌಲ್ಯದ ಆಸ್ತಿಗೆ ಒಡೆಯನಾಗಲು ಮೃತ ತಂದೆಯ ಬೆರಳುಗಳಿಗೆ ಮಸಿ ಬಳಸಿ ಖಾಲಿ ಕಾಗದಗಳ ಮೇಲೆ ಹೆಬ್ಬೆರಳಿನ ಗುರುತುಗಳನ್ನು ಪಡೆದುಕೊಂಡಿದ್ದಾನೆ.
ಸ್ಥಳೀಯರು ಚಿತ್ರೀಕರಿಸಿದ ವೀಡಿಯೊ ಆಧಾರದ ಮೇಲೆ, ಮೃತರ ಹೆಣ್ಣುಮಕ್ಕಳು ನೀಡಿರುವ ದೂರಿನಂತೆ ಪೊಲೀಸರು ಪ್ರಕರಣದ ಪೂರ್ಣ ತನಿಖೆಗೆ ಆದೇಶಿಸಿದ್ದಾರೆ.








