ಕಾಪು : ಖಾಸಗಿ ಬಸ್ಸೊಂದರಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಅಪಾಯಕಾರಿಯಾಗಿ ನೇತಾಡಿ ಕೊಂಡು ಪ್ರಯಾಣಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಿ, ಬಸ್ಸಿನ್ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಮಿತಿಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡು ಅಪಾಯಕಾರಿಯಾಗಿ ಚಲಾಯಿಸಿದ ಆರೋಪದ ಮೇಲೆ ‘ಆನಂದ್’ ಖಾಸಗಿ ಬಸ್‌ನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಆಗಸ್ಟ್ 14ರಂದು ಬೆಳಿಗ್ಗೆ ಕಾಪು ಕಡೆಯಿಂದ ಉಡುಪಿ ಕಡೆಗೆ ಹೊರಟಿದ್ದ ‘ಆನಂದ್’ ಹೆಸರಿನ ಖಾಸಗಿ ವೇಗದೂತ ಬಸ್ಸಿನಲ್ಲಿ ಈ ನಿಯಮ ಉಲ್ಲಂಘನೆ ಕಂಡುಬಂದಿದೆ. ಬಸ್ಸಿನ ಚಾಲಕ ಹಾಗೂ ನಿರ್ವಾಹಕನು ಪರವಾನಗಿ ಅಭಿಯಾನದ ನಿಯಮಗಳನ್ನು ಗಾಳಿಗೆ ತೂರಿ, ನಿಗದಿತ ಮಿತಿಗಿಂತಲೂ ಅಧಿಕ ಪ್ರಯಾಣಿಕರನ್ನು ಬಸ್ಸಿನೊಳಗೆ ತುಂಬಿಸಿಕೊಂಡಿದ್ದರು.ಅಲ್ಲದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನೇತಾಡಿಕೊಂಡು ಪ್ರಯಾಣಿಸುವಂತೆ ಮಾಡಲಾಗಿತ್ತು.
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಮಕ್ಕೆ ಆಗ್ರಹಿಸಲಾಗಿತ್ತು. ಇದೀಗ ಪ್ರಯಾಣಿಕರ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತ್ಯಂತ ದುಡುಕುತನ ಮತ್ತು ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿಕೊಂಡು ಹೋಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕಾಪು ಪೊಲೀಸರು ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.








