ಕೇರಳ : ಪತಿಯ ಅಗಲಿಕೆಯ ದುಃಖ ತಾಳಲಾರದೆ, ಅವರ ಅಂತ್ಯಕ್ರಿಯೆಯ ವೇಳೆ ಭಾವುಕರಾಗಿ ಕೊನೆಯ ಮುತ್ತು ನೀಡಿದ ಪತ್ನಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಅತ್ಯಂತ ಕರುಣಾ ಜನಕ ಘಟನೆ ಕೇರಳದ ಪಾಲಾದಲ್ಲಿ ನಡೆದಿದೆ. ಪಾಲಾದ ಪುಥೆನ್ಪಲ್ಲಿಕುನ್ನು ವಝಾಯಿಲ್ ನಿವಾಸಿ ಕುರಿಯನ್ ಜೋಸೆಫ್ (ಕುರ್ಯಾಚನ್ – 73) ಅವರ ಪತ್ನಿ ಶಿರ್ಲಿ ಕುರಿಯನ್ (71) ನಿಧನರಾದ ದುರ್ದೈವಿ.
ಕೇರಳ ಕಾಂಗ್ರೆಸ್ ಸ್ಟೀರಿಂಗ್ ಸಮಿತಿ ಸದಸ್ಯರೂ ಹಾಗೂ ಪಾಲಾದ ಹಿರಿಯ ಉದ್ಯಮಿಯೂ ಆಗಿದ್ದ ಕುರಿಯನ್ ಜೋಸೆಫ್ ಅವರು ಆಗಸ್ಟ್ 15 ರಂದು ಮಧ್ಯಾಹ್ನ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯ ಮೊದಲ ಭಾಗದ ಧಾರ್ಮಿಕ ವಿಧಿವಿಧಾನಗಳು ನಿನ್ನೆ ಬೆಳಿಗ್ಗೆ 11 ಗಂಟೆಗೆ ಅವರ ನಿವಾಸದಲ್ಲಿ ಪೂರ್ಣಗೊಂಡಿದ್ದವು. ಪತಿಯ ಭೌತಿಕ ಶರೀರವನ್ನು ಚರ್ಚ್ಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗ, ಪತಿಗೆ ಕೊನೆಯ ಮುತ್ತು ನೀಡಿದ ಶಿರ್ಲಿ ಅವರು ತೀವ್ರ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಪಾಲಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.








