ಕೋಲ್ಕತ್ತ : ಮಧ್ಯ ಕೋಲ್ಕತ್ತದ ಮಿರ್ಜಾ ಗಾಲಿಬ್ ಬೀದಿಯಲ್ಲಿರುವ ಹೋಟೆಲ್ ಒಂದರಲ್ಲಿ ಬುಧವಾರ (ಆಗಸ್ಟ್ 19) ನಸುಕಿನ ವೇಳೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಅಗ್ನಿಶಾಮಕ ಇಲಾಖೆಯ ಪ್ರಧಾನ ಕಚೇರಿಯ ಸಮೀಪದಲ್ಲೇ ಇರುವ ಈ ಹೋಟೆಲ್‌ನಲ್ಲಿ ನಸುಕಿನ 1.45 ರ ಸುಮಾರಿಗೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳಕ್ಕೆ ಧಾವಿಸಿದ ಐದು ಅಗ್ನಿಶಾಮಕ ವಾಹನಗಳು, ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ಇಲಾಖೆಯ (DMRF) ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆದರೆ ಕಟ್ಟಡದಾದ್ಯಂತ ಆವರಿಸಿದ್ದ ದಟ್ಟ ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿಗೆ ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗಳನ್ನು ತಲುಪುವುದು ತೀವ್ರ ಸವಾಲಾಗಿ ಪರಿಣಮಿಸಿತು.
ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಗಿದ್ದು, ಸದ್ಯ ಕೂಲಿಂಗ್ ಪ್ರಕ್ರಿಯೆ ಮುಂದುವರಿದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.








