ಮುಂಬೈ : ಮುಂಬೈನಲ್ಲಿ ಪ್ರಸಿದ್ಧ ವಿಚಾರವಾದಿ ಹಾಗೂ ಮೂಢನಂಬಿಕೆ ವಿರೋಧಿ ಹೋರಾಟಗಾರ ಡಾ. ನರೇಂದ್ರ ಧಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪ್ರಮುಖ ಆರೋಪಿ ಸಚಿನ್ ಅಂದೂರೆಗೆ ಮುಂಬೈ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಆರೋಪಿಯ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವ ನ್ಯಾಯಪೀಠ, ಆತನಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಕಳೆದ 2024ರ ಮೇ ತಿಂಗಳಲ್ಲಿ ಪುಣೆಯ ವಿಶೇಷ ನ್ಯಾಯಾಲಯವು ಸಚಿನ್ ಅಂದೂರೆ ಹಾಗೂ ಶರದ್ ಕಲಾಸ್ಕರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪೈಕಿ ಶರದ್ ಕಲಾಸ್ಕರ್‌ಗೆ ಈಗಾಗಲೇ ಜಾಮೀನು ಸಿಕ್ಕಿದ್ದು, ಇದೀಗ ಮತ್ತೊಬ್ಬ ಆರೋಪಿ ಸಚಿನ್ ಅಂದೂರೆಗೂ ಜಾಮೀನು ದೊರೆತಂತಾಗಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್, ಸಚಿನ್ ಅಂದೂರೆ ವಿರುದ್ಧ ಸಲ್ಲಿಕೆಯಾಗಿರುವ ಸಾಕ್ಷ್ಯಾಧಾರಗಳು ಅತ್ಯಂತ ದುರ್ಬಲವಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಸಾಕ್ಷಿಗಳ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಮತ್ತು ಸೂಕ್ತ ಪುರಾವೆಗಳ ಕೊರತೆಯನ್ನು ಉಲ್ಲೇಖಿಸಿ, ಮೇಲ್ಮನವಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಶಿಕ್ಷೆಯನ್ನು ತಡೆಹಿಡಿದು ಜಾಮೀನು ನೀಡಿದೆ.
2013ರ ಆಗಸ್ಟ್ 20ರಂದು ಪುಣೆಯಲ್ಲಿ ಬೆಳಗಿನ ವಾಯುವಿಹಾರದಲ್ಲಿದ್ದ ನರೇಂದ್ರ ಧಾಬೋಲ್ಕರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ಹೈಕೋರ್ಟ್‌ನ ಪ್ರಸ್ತುತ ತೀರ್ಪು ಪ್ರಕರಣದ ಕಾನೂನು ಹೋರಾಟದಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ.








