ಮಹಾರಾಷ್ಟ್ರ: ಸಿಸೇರಿಯನ್ ಹೆರಿಗೆಯ ವೇಳೆ ವೈದ್ಯರು ಸರ್ಜಿಕಲ್ ಗ್ಲೌಸ್ ಮತ್ತು ಪೇಪರ್ ವೈಪ್ಸ್‌ಗಳನ್ನು ಆಕೆಯ ಹೊಟ್ಟೆಯೊಳಗೇ ಬಿಟ್ಟು ಹೊಲಿಗೆ ಹಾಕಿದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಪ್ರಸ್ತುತ 19 ವರ್ಷದ ನವವಧು ಸಂಧ್ಯಾ ಸೂರಜ್ ಗಾಯಕ್ವಾಡ್ ಎಂಬಾಕೆ ಗಂಭೀರ ಸ್ಥಿತಿಯಲ್ಲಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಆಗಸ್ಟ್ 1 ರಂದು ನಡೆದಿದ್ದ ಶಸ್ತ್ರಚಿಕಿತ್ಸೆ
ಸಂಧ್ಯಾ ಅವರು ಆಗಸ್ಟ್ 1 ರಂದು ಬೀಡ್ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ನಾಲ್ಕು ದಿನಗಳ ನಂತರ ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಮನೆಗೆ ತೆರಳಿದ ಕೆಲವೇ ದಿನಗಳಲ್ಲಿ ಆಕೆಗೆ ಹೊಟ್ಟೆಯಲ್ಲಿ ತೀವ್ರ ಹಾಗೂ ತಡೆಯಲಾರದ ನೋವು ಕಾಣಿಸಿಕೊಂಡಿದೆ.
ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್‌ನಲ್ಲಿ ಬಯಲಾದ ಸತ್ಯ
ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ಆಕೆಯ ಹೊಟ್ಟೆಯೊಳಗೆ ವಿದೇಶಿ ಗ್ಲೌಸ್ ಇರುವುದು ಪತ್ತೆಯಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಆಕೆಯನ್ನು ಪುಣೆಯ ಸಸೂನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಮೊದಲ ಶಸ್ತ್ರಚಿಕಿತ್ಸೆಯ ವೇಳೆ ಹೊಟ್ಟೆಯಲ್ಲಿಯೇ ಬಿಟ್ಟು ಹೋಗಿದ್ದ ಸರ್ಜಿಕಲ್ ಗ್ಲೌಸ್ ಹಾಗೂ ಪೇಪರ್ ವೈಪ್ಸ್‌ಗಳನ್ನು ಹೊರಗೆ ತೆಗೆದಿದ್ದಾರೆ.
ಮಗುವನ್ನು ಎತ್ತಿಕೊಳ್ಳಲೂ ಚೈತನ್ಯವಿಲ್ಲದ ತಾಯಿ!
ಈ ಘಟನೆಯಿಂದ ಯುವತಿಯ ಕುಟುಂಬಸ್ಥರು ತೀವ್ರ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ. “ವೈದ್ಯರ ಬೇಜವಾಬ್ದಾರಿತನದಿಂದಲೇ ನನ್ನ ಹೆಂಡತಿಯ ಜೀವಕ್ಕೆ ಕಂಟಕ ಎದುರಾಗಿದೆ” ಎಂದು ಸಂಧ್ಯಾ ಅವರ ಪತಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ನವಜಾತ ಶಿಶುವನ್ನು ಎತ್ತಿಕೊಳ್ಳಲು ಕೂಡ ತನ್ನ ಮಗಳಿಗೆ ಶಕ್ತಿಯಿಲ್ಲದಂತಾಗಿದೆ ಎಂದು ಸಂಧ್ಯಾ ಅವರ ತಾಯಿ ಕಣ್ಣೀರಿಟ್ಟಿದ್ದಾರೆ.
ವೈದ್ಯರಿಗೆ ನೋಟಿಸ್ ರವಾನೆ, ತನಿಖೆಗೆ ಆದೇಶ
ಘಟನೆ ಸಂಬಂಧ ಸಂಧ್ಯಾ ಅವರ ಕುಟುಂಬಸ್ಥರು ಬೀಡ್ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಬೀಡ್ ಜಿಲ್ಲಾ ಶಸ್ತ್ರಚಿಕಿತ್ಸಕ ಸತೀಶ್‌ಕುಮಾರ್ ಸೋಲಂಕೆ ಅವರು, ಶಸ್ತ್ರಚಿಕಿತ್ಸೆಯ ತಂಡದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ತನಿಖೆ ನಡೆದು, ತಪ್ಪಿತಸ್ಥರು ಎಂದು ಸಾಬೀತಾದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.








