ಉಡುಪಿ : ಕಾಪು ತಾಲೂಕಿನ ಮುದರಂಗಡಿ ಜಂಕ್ಷನ್‌ನಲ್ಲಿ ನಡೆದ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ (David d’souza) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಸಂಚು ರೂಪಿಸಿ ಹಣಕಾಸು ನೆರವು ನೀಡಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಉತ್ತರಾಖಂಡ ರಾಜ್ಯದ ನೈನಿತಾಲ್‌ನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ ಶೇಖ್‌ಪುರ ಮೂಲದ ಸೂರಜ್ ಕುಮಾರ್ (31) ಎಂದು ಗುರುತಿಸಲಾಗಿದೆ. ಈತನ ಬಂಧನದೊಂದಿಗೆ ಈ ಕೊಲೆ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಒಟ್ಟು ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಆಗಸ್ಟ್ 7ರ ಸಂಜೆ ಸುಮಾರು 3:45ರ ವೇಳೆಗೆ ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಕಚೇರಿಯಲ್ಲಿದ್ದ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಪ್ರಮುಖ ಆರೋಪಿ ರಾಜು ಹಾಗೂ ಆತನ ಸಹಚರರಾದ ಅನ್ಮೋಲ್ ರಸ್ತೋಗಿ, ಜಿಯಾಹುಲ್ ವಾಜುಲ್ ಶೇಖ್ ಅವರನ್ನು ಬಂಧಿಸಿದ್ದರು. ಕಾರ್ಯಾಚರಣೆ ವೇಳೆ ಪ್ರಮುಖ ಆರೋಪಿ ರಾಜು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. ಗಾಯಾಳು ರಾಜುಗೆ ಉಡುಪಿಯ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಹತ್ಯೆಗೆ ಅಪರಾಧಿಕ ಒಳಸಂಚು ನಡೆಸಿ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಹಾಗೂ ಕಿಶೋರ್ ರಾಮ ಪೂಜಾರಿ ಎಂಬವರನ್ನು ಬಂಧಿಸಿದ್ದರು. ಇದೀಗ ಕೃತ್ಯಕ್ಕೆ ಹಣಕಾಸು ಪೂರೈಸಿ ತಲೆಮರೆಸಿಕೊಂಡಿದ್ದ ಸೂರಜ್ ಕುಮಾರ್‌ನನ್ನು ಉತ್ತರಾಖಂಡದ ನೈನಿತಾಲ್‌ನಲ್ಲಿ ಖೆಡ್ಡಾಕ್ಕೆ ಬೀಳಿಸಲಾಗಿದ್ದು, ಆತನಿಂದ ಕೃತ್ಯಕ್ಕೆ ಬಳಸಲಾದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








