ಲಕ್ನೋ : ಕೌಟುಂಬಿಕ ಕಲಹ ಹಾಗೂ ದಾಂಪತ್ಯ ವಿವಾದದ ಹಿನ್ನೆಲೆಯಲ್ಲಿ ಎಸ್‌ಬಿಐ ಉದ್ಯೋಗಿಯೊಬ್ಬರು ಬ್ಯಾಂಕ್ ಅಧಿಕಾರಿಯಾಗಿದ್ದ ತಮ್ಮ ಪತ್ನಿಯನ್ನು ಕಚೇರಿ ಮುಂಭಾಗದಲ್ಲೇ ಗುಂಡಿಕ್ಕಿ ಕೊಂದ ಬಳಿಕ, ಮನೆಗೆ ತೆರಳಿ ತಂಗಿಗೂ ಗುಂಡಿಟ್ಟು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಲಕ್ನೋದ ಗೋಮತಿ ನಗರದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಉದ್ಯೋಗಿಯಾಗಿದ್ದ ಮಾನಸ್ ವಾಜಪೇಯಿ (38) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ದುರಂತ ನಾಯಕ. ಐಸಿಐಸಿಐ ಬ್ಯಾಂಕ್ ಉದ್ಯೋಗಿ ದಿವ್ಯಾ ಮಿಶ್ರಾ (35) ಹಾಗೂ ಮಾನಸ್ ಅವರ ಸಹೋದರಿ ಶಿವಾ ವಾಜಪೇಯಿ (28) ಮೃತಪಟ್ಟವರು. ಮಾನಸ್ ಹಾಗೂ ದಿವ್ಯಾಗೆ 12 ವರ್ಷಗಳ ಹಿಂದೆ ವಿವಾಹವಾಗಿದ್ದು, ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಮಧ್ಯಾಹ್ನ ಗೋಮತಿ ನಗರದ ಐಸಿಐಸಿಐ ಬ್ಯಾಂಕ್‌ಗೆ ತೆರಳಿದ ಮಾನಸ್, ಹೊರಗಡೆ ನಿಂತಿದ್ದ ಪತ್ನಿ ದಿವ್ಯಾ ಜೊತೆ ಕೆಲವು ನಿಮಿಷ ಮಾತನಾಡಿ, ಬಳಿಕ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ. ತೀವ್ರ ಗಾಯಗೊಂಡ ದಿವ್ಯಾ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿಯನ್ನು ಕೊಂದ ಬಳಿಕ ಗಲಿಬಿಲಿಯಿಂದ ಮನೆಗೆ ಓಡಿಬಂದ ಮಾನಸ್ “ನನಗೆ ಮೋಸ ಮಾಡಿದ ಹೆಂಡತಿಯನ್ನು ಕೊಂದಿದ್ದೇನೆ, ಈಗ ನನ್ನನ್ನು ಮತ್ತು ತಂಗಿಯನ್ನು ಕೊಲ್ಲುತ್ತಿದ್ದೇನೆ” ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದಾನೆ. ಬಳಿಕ ಹನುಮಾನ್ ಚಾಲೀಸಾ ಹಾಡನ್ನು ಜೋರಾಗಿ ನುಡಿಸುತ್ತಾ ತಂಗಿ ಶಿವಾ ವಾಜಪೇಯಿಗೆ ಗುಂಡಿಟ್ಟು ಕೊಂದಿದ್ದಾನೆ. ಬಳಿಕ ತಾನೂ ಅದೇ ಪಿಸ್ತೂಲ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಘಟನೆ ಸಂಬಂಧ ಯುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








