ಕೋಲಾರ: ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ತನ್ನದೇ ಸಾವಿನ ನಾಟಕವಾಡಿ ಬರೋಬ್ಬರಿ 11 ವರ್ಷಗಳ ಕಾಲ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ‘ದೃಶ್ಯಂ’ ಸಿನಿಮಾ ಮಾದರಿಯಲ್ಲಿ ತನ್ನ ಸಾವಿನ ಸನ್ನಿವೇಶ ಸೃಷ್ಟಿಸಿದ್ದ ಅರುಣ್ ಕುಮಾರ್ ರೆಡ್ಡಿಯನ್ನು ಕ್ಯಾಸಂಬಳ್ಳಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
2015ರ ಫೆಬ್ರವರಿ 9ರಂದು ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಸಮೀಪ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಸ್ಥಳದಲ್ಲಿ ಅರುಣ್ ಕುಮಾರ್ ರೆಡ್ಡಿಯ ಬೈಕ್ ಹಾಗೂ ಗುರುತಿನ ಚೀಟಿ ದೊರೆತಿದ್ದ ಹಿನ್ನೆಲೆಯಲ್ಲಿ, ಮೃತಪಟ್ಟ ವ್ಯಕ್ತಿ ಅರುಣ್ ಆಗಿರಬಹುದು ಎಂದು ಆರಂಭದಲ್ಲಿ ಪೊಲೀಸರು ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ಪತ್ತೆಯಾದ ಶವ ಅರುಣ್ ಕುಮಾರ್ ರೆಡ್ಡಿಯದ್ದಲ್ಲ ಎಂಬುದು ದೃಢಪಟ್ಟಿತ್ತು.
ತನಿಖೆಯಲ್ಲಿ ಅರುಣ್ ಕುಮಾರ್ ರೆಡ್ಡಿಯೇ ತನ್ನ ಸಾವಿನ ನಾಟಕ ರೂಪಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಸಾಲಗಾರರಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ವಿಮೆ ಹಣ ಪಡೆಯುವ ಉದ್ದೇಶದಿಂದ ತಾನು ಮೃತಪಟ್ಟಿದ್ದೇನೆ ಎಂದು ನಂಬಿಸುವ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಇದಕ್ಕಾಗಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದ ಮತ್ತೊಂದು ಮೃತದೇಹವನ್ನು ಹೊರತೆಗೆದು ಕ್ಯಾಸಂಬಳ್ಳಿ ಸಮೀಪಕ್ಕೆ ತಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಶವವನ್ನು ನೀಲಗಿರಿ ತೋಪಿನಲ್ಲಿ ಇರಿಸಿ ಬೆಂಕಿ ಹಚ್ಚಿ, ಸ್ಥಳದಲ್ಲಿ ತನ್ನ ಬೈಕ್ ಹಾಗೂ ಗುರುತಿನ ಚೀಟಿಯನ್ನು ಬಿಟ್ಟು ಪರಾರಿಯಾಗಿದ್ದ ಎನ್ನಲಾಗಿದೆ. ಶವ ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ಆರಂಭದಲ್ಲಿ ಪೊಲೀಸರು ಗೊಂದಲಕ್ಕೊಳಗಾಗಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ನಿಜಾಂಶ ಬಯಲಾಗಿತ್ತು.
ಪ್ರಕರಣ ಬಯಲಾದ ನಂತರ ಪೊಲೀಸರು ಅರುಣ್ ಕುಮಾರ್ ರೆಡ್ಡಿಗಾಗಿ ಹುಡುಕಾಟ ನಡೆಸಿದ್ದರು. 2015ರಲ್ಲೇ ಬೆಂಗಳೂರಿನಲ್ಲಿ ಆತನನ್ನು ಬಂಧಿಸಲಾಗಿತ್ತು ಎನ್ನಲಾಗಿದ್ದು, ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಸುಮಾರು 11 ವರ್ಷಗಳ ಬಳಿಕ ಚೆನ್ನೈನಲ್ಲಿ ಆತನ ಇರುವಿಕೆಯ ಬಗ್ಗೆ ಸುಳಿವು ಪಡೆದ ಕ್ಯಾಸಂಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚುವಲ್ಲಿ ಆತನ ಹೆಸರಿನಲ್ಲಿದ್ದ ಮತ್ತೊಂದು ಸಿಮ್ ಕಾರ್ಡ್ ಪ್ರಮುಖ ಸುಳಿವು ನೀಡಿದೆ. ಸಿಮ್‌ನ ಕರೆ ವಿವರ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಆತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ, ತನಿಖೆ ಮುಂದುವರಿಸಿ ಚೆನ್ನೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಸಾವಿನ ನಾಟಕವಾಡಿದ್ದಾಗಿ ಅರುಣ್ ಕುಮಾರ್ ರೆಡ್ಡಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.








