ಕಾಸರಗೋಡು: ಕುಂಬಳೆಯ 64 ವರ್ಷದ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ, ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ ಆರೋಪದಲ್ಲಿ ದಂಪತಿ ಸೇರಿದಂತೆ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಆ.16ರಂದು ₹5,000 ಸಾಲ ಮರಳಿಸುವುದಾಗಿ ನಂಬಿಸಿ ವ್ಯಾಪಾರಿಯನ್ನು ಮನೆಗೆ ಕರೆಸಿಕೊಂಡ ಮಹಿಳೆ, ಬಳಿಕ ಆತನನ್ನು ಕೊಠಡಿಗೆ ಕರೆದೊಯ್ದಿದ್ದಾಳೆ ಎನ್ನಲಾಗಿದೆ. ಅಲ್ಲಿ ಅಡಗಿದ್ದ ಆರೋಪಿಗಳು ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಿ ಹಲ್ಲೆ ನಡೆಸಿದ ಬಳಿಕ, ಹಣ, ಮೊಬೈಲ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಕಸಿದುಕೊಂಡಿದ್ದಾರೆ. ನಂತರ ಎಟಿಎಂ ಪಿನ್ ಪಡೆದು ಖಾತೆಯಿಂದ ₹7,200 ಹಣವನ್ನೂ ಡ್ರಾ ಮಾಡಿರುವ ಆರೋಪವಿದೆ.
ಮತ್ತಷ್ಟು ಹಣಕ್ಕಾಗಿ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದು, ರಿಜ್ವಾನ, ಆಕೆಯ ಪತಿ ಹಸನ್ ಆಸಿಫ್ ಹಾಗೂ ಸಂಬಂಧಿ ಸಿರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.








