ಮಂಗಳೂರು: ವರಮಹಾಲಕ್ಷ್ಮೀ ವ್ರತದ ಅಂಗವಾಗಿ ಮಂಗಳೂರಿನ ವಿವಿಧ ದೇವಸ್ಥಾನ ಹಾಗೂ ಕ್ಷೇತ್ರಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ ಹಾಗೂ ಭಜನಾ ಕಾರ್ಯಕ್ರಮಗಳನ್ನು ನಡೆಸಿದರು.
ಶ್ರೀ ಮಂಗಳಾದೇವಿ ಕ್ಷೇತ್ರ, ಕೊಡಿಯಾಲ್ಬೈಲ್ ಶ್ರೀ ಭಗವತಿ ಕ್ಷೇತ್ರ , ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಉರ್ವ ಶ್ರೀ ಮಾರಿಯಮ್ಮ ಕ್ಷೇತ್ರ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ವರಮಹಾಲಕ್ಷ್ಮೀ ವ್ರತದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕೊಡಿಯಾಲ್ಬೈಲ್ ಶ್ರೀ ಭಗವತಿ ಕ್ಷೇತ್ರದಲ್ಲಿ ಮಹಿಳೆಯರು ಸಾಮೂಹಿಕವಾಗಿ ಪೂಜೆ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿಯೂ ವರಮಹಾಲಕ್ಷ್ಮೀ ಪೂಜೆ ನೆರವೇರಿತು. ಉರ್ವ ಶ್ರೀ ಮಾರಿಯಮ್ಮ ಕ್ಷೇತ್ರದಲ್ಲಿ ಕುಂಕುಮಾರ್ಚನೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.
ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿ, ಕುಟುಂಬದ ಸುಖ, ಸಮೃದ್ಧಿ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ವಿವಿಧ ದೇವಸ್ಥಾನಗಳಲ್ಲಿ ನಡೆದ ಕಾರ್ಯಕ್ರಮಗಳು ಭಕ್ತಿಭಾವದ ವಾತಾವರಣಕ್ಕೆ ಸಾಕ್ಷಿಯಾದವು.








