ಬೆಂಗಳೂರು: ನಗರದ ವೈಟ್ಫೀಲ್ಡ್ ಪೊಲೀಸರ ಕಾರ್ಯವೈಖರಿ ಕುರಿತು ಹೈಕೋರ್ಟ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣದ ವಿಚಾರಣೆಗೆ ಎಸಿಪಿ ಹಾಗೂ ಡಿಸಿಪಿ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ. ಅಧಿಕಾರಿಗಳು ವಿಚಾರಣೆಗೆ ಹಾಜರಾಗದಿದ್ದಲ್ಲಿ ಪೊಲೀಸ್ ಕಮಿಷನರ್ಗೆ ಸಮನ್ಸ್ ಜಾರಿಗೊಳಿಸುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದೆ.
ವೈಟ್ಫೀಲ್ಡ್ನಲ್ಲಿ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮ ಆಯೋಜನೆಗೊಂಡಿದ್ದ ಸಂದರ್ಭದಲ್ಲಿ, ಶೋ ರದ್ದುಗೊಳಿಸುವಂತೆ ಮೋಹನ್ ಗೌಡ ಎಂಬುವರು ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಕೆಯ ಬಳಿಕ ಕಾರ್ಯಕ್ರಮ ರದ್ದುಗೊಂಡಿತ್ತು.
ಶೋ ರದ್ದಾದ ವಿಚಾರವನ್ನು ಮೋಹನ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು. ಆದರೆ, ಇದೇ ಪೋಸ್ಟ್ ಆಧರಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದಡಿ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಈ ಎಫ್ಐಆರ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ವೈಟ್ಫೀಲ್ಡ್ ಪೊಲೀಸರ ಕ್ರಮಗಳ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆಯಲಿರುವ ವಿಚಾರಣೆಗೆ ಎಸಿಪಿ ಹಾಗೂ ಡಿಸಿಪಿ ಖುದ್ದಾಗಿ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಅಧಿಕಾರಿಗಳು ಖುದ್ದು ಹಾಜರಾಗದಿದ್ದರೆ ಪೊಲೀಸ್ ಕಮಿಷನರ್ ಅವರಿಗೆ ಸಮನ್ಸ್ ನೀಡುವ ಎಚ್ಚರಿಕೆಯನ್ನೂ ನ್ಯಾಯಾಲಯ ನೀಡಿದೆ. ಹೀಗಾಗಿ, ಮೋಹನ್ ಗೌಡ ವಿರುದ್ಧದ ಎಫ್ಐಆರ್ ಹಾಗೂ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.








