ಇಂದೋರ್: ವೇಗವಾಗಿ ಕಾರು ಚಲಾಯಿಸುತ್ತಿದ್ದುದನ್ನು ತಡೆಯಲು ಮುಂದಾದ ಭದ್ರತಾ ಸಿಬ್ಬಂದಿಯೊಂದಿಗೆ ಚಾಲಕನಿಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ಚಾಲಕ ತನ್ನ ಎಸ್‌ಯುವಿಯಿಂದ ಭದ್ರತಾ ಸಿಬ್ಬಂದಿಗೆ ಡಿಕ್ಕಿ ಹೊಡೆದು, ಆತನನ್ನು ವಾಹನದಡಿ ಸಿಲುಕಿಸಿ ಕೊಂದಿರುವ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಎಸ್‌ಯುವಿ ಚಾಲಕ ಹಾಗೂ ಆತನೊಂದಿಗೆ ಇದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ ವಸತಿ ಸಮುಚ್ಚಯವೊಂದರಲ್ಲಿ ಈ ಘಟನೆ ನಡೆದಿದೆ. ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಚಾಲಕನನ್ನು ಪ್ರಶ್ನಿಸಿ ನಿಧಾನವಾಗಿ ವಾಹನ ಚಲಾಯಿಸುವಂತೆ ಸೂಚಿಸಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ವಾಗ್ವಾದದ ಬಳಿಕ ಚಾಲಕ ಎಸ್‌ಯುವಿಯನ್ನು ಚಲಾಯಿಸಿಕೊಂಡು ಹೋಗುವಾಗ ಭದ್ರತಾ ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.








