ತ್ರಿಶೂರ್ : ಟ್ರಾನ್ಸ್‌ವುಮೆನ್ (ಲಿಂಗಪರಿವರ್ತಿತ ಮಹಿಳೆ) ದೀಪ್ತಿ ಕಲ್ಯಾಣಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ‘ಸ್ಪಾರ್ಟಾದ ಹೆಲೆನ್’ ಎಂದೇ ಪ್ರಸಿದ್ಧರಾಗಿರುವ ಯೂಟ್ಯೂಬರ್ ಧನ್ಯಾ ಹರ್ಷಿದ್ ವಿರುದ್ಧ ಮತ್ತೊಂದು ಪೊಲೀಸ್ ಪ್ರಕರಣ ದಾಖಲಾಗಿದೆ. ತ್ರಿಶೂರ್ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಕೆಯಾದ ದೂರಿನ ಆಧಾರದ ಮೇಲೆ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಾಗಿದೆ.
ಧನ್ಯಾ ಹರ್ಷಿದ್ ಕೆಲವು ದಿನಗಳ ಹಿಂದೆ ದೀಪ್ತಿ ಕಲ್ಯಾಣಿ ಮತ್ತು ಅವರ ಸ್ನೇಹಿತೆಯನ್ನು ನಿಂದಿಸಿ, ಅವಮಾನಿಸುವ ರೀತಿಯ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ದೀಪ್ತಿ ಮತ್ತು ಅವರ ಸ್ನೇಹಿತೆ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಧನ್ಯಾ ಕಠಿಣ ಪದಗಳಿಂದ ಆರೋಪಿಸಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ದೀಪ್ತಿ ಕಲ್ಯಾಣಿ ಅವರು ತ್ರಿಶೂರ್ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಿದ್ದರು. ಧನ್ಯಾ ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಅನಗತ್ಯ ಮತ್ತು ನಿಂದನೀಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೀಪ್ತಿ ದೂರಿನಲ್ಲಿ ತಿಳಿಸಿದ್ದರು.
ದೂರಿನ ಅನ್ವಯ ಯೂಟ್ಯೂಬರ್ ಧನ್ಯಾ ವಿರುದ್ಧ ಒಟ್ಟು ಆರು ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ಕಾಯ್ದಿರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (BNS), ಮಾಹಿತಿ ತಂತ್ರಜ್ಞಾನ ಕಾಯ್ದೆ, ಕೇರಳ ಪೊಲೀಸ್ ಕಾಯ್ದೆ ಹಾಗೂ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಂದಹಾಗೆ, ಯೂಟ್ಯೂಬರ್ ಧನ್ಯಾ ಹರ್ಷಿದ್ ವಿವಾದಕ್ಕೀಡಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಜುಲೈ ತಿಂಗಳಿನಲ್ಲಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ ಆರೋಪದ ಮೇಲೆಯೂ ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಘಟನೆಯ ಬೆನ್ನಲ್ಲೇ ಮೋಟಾರು ವಾಹನ ಇಲಾಖೆಯು ಧನ್ಯಾ ಅವರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಿತ್ತು.








