ಅಮರಾವತಿ : ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ ವಸಿಷ್ಠ ಸೇತುವೆಯ ಬಳಿ ಮನಕಲಕುವ ದುರಂತವೊಂದು ಸಂಭವಿಸಿದೆ. 3 ವರ್ಷದ ಕಂದಮ್ಮನನ್ನು ದ್ವಿಚಕ್ರ ವಾಹನದ ಮೇಲೆಯೇ ಬಿಟ್ಟು ದಂಪತಿಯು ಉಕ್ಕಿ ಹರಿಯುತ್ತಿದ್ದ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ವೆಲ್ಪುರು ಗ್ರಾಮದ ನಿವಾಸಿಗಳಾದ ಸಾಯಿಕೃಷ್ಣ ಅಲಿಯಾಸ್ ದೊಡ್ಡ ಸಾಯಿ (29) ಮತ್ತು ಆತನ ಪತ್ನಿ ಶಿರೀಷಾ (28) ನದಿಗೆ ಧುಮುಕಿದ ದಂಪತಿ.
ಪೋಲಿಸರ ಮಾಹಿತಿಯಂತೆ, ಘಟನೆ ನಡೆದ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ದಂಪತಿಯು ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಸೇತುವೆ ಬಳಿ ಬಂದಿದ್ದಾರೆ. ಬಳಿಕ ಮೂರು ವರ್ಷದ ಮಗುವನ್ನು ಸ್ಕೂಟರ್ ಮೇಲೆಯೇ ಕುಳ್ಳಿರಿಸಿ, ದಂಪತಿ ನದಿಗೆ ಹಾರಿದ್ದಾರೆ. ಕತ್ತಲು ಹಾಗೂ ಚಳಿಯ ಮಧ್ಯೆ ಮಗು ಒಂಟಿಯಾಗಿ ಸ್ಕೂಟರ್ ಬಳಿ ನಿಂತು ‘ಅಮ್ಮ… ಅಪ್ಪ…’ ಎಂದು ಕಣ್ಣೀರು ಹಾಕುತ್ತಿದ್ದುದನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ರಕ್ಷಿಸಿ, ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಮಗುವನ್ನು ಆತನ ತಂದೆಯ ಸಹೋದರಿಗೆ (ಚಿಕ್ಕಮ್ಮ) ಒಪ್ಪಿಸಲಾಗಿದೆ. ತನ್ನ ಕಣ್ಣೆದುರಲ್ಲೇ ಪೋಷಕರು ನದಿಗೆ ಹಾರುವುದನ್ನು ಕಂಡು ಮಾತನಾಡಲಾಗದೆ ಮೌನ ಯಾತನೆ ಅನುಭವಿಸಿದ ಬಾಲಕನ ಸ್ಥಿತಿ ಕಂಡು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಾಯಿಕೃಷ್ಣ ಹಿಂದೆ ಗಲ್ಫ್ ದೇಶದಲ್ಲಿದ್ದನು. ಇತ್ತೀಚೆಗೆ ಊರಿಗೆ ಮರಳಿದ್ದ ಆತ ತೀವ್ರ ಸಾಲದ ಹೊರೆ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದನು. ಆರ್ಥಿಕ ಸಂಕಷ್ಟ ತಡೆಯಲಾಗದೆ ದಂಪತಿ ತಮ್ಮ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ. ಸಾಲದ ಒತ್ತಡವೇ ಈ ನಿರ್ಧಾರಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನದಿಗೆ ಹಾರಿದ ದಂಪತಿಗಾಗಿ ಸ್ಥಳೀಯ ಪೊಲೀಸರು, ನುರಿತ ಈಜುಗಾರರು ಹಾಗೂ ದೋಣಿ ತಂಡಗಳ ನೆರವಿನೊಂದಿಗೆ ನದಿಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








