ನ್ಯೂಯಾರ್ಕ್: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವೀಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಲಕ್ಷ್ ಗೋಪಿಸೆಟ್ಟಿ ಅವರ ಸಂಪರ್ಕ ಕಡಿತಗೊಂಡಿದೆ. ವೈಯಕ್ತಿಕ ಪ್ರವಾಸದ ಹಿನ್ನೆಲೆಯಲ್ಲಿ ಅವರು ನೇಪಾಳಕ್ಕೆ ತೆರಳಿದ್ದರು ಎಂದು ಇನ್ಫೋಸಿಸ್ ತಿಳಿಸಿದೆ. ಪ್ರವಾಹದ ಬಳಿಕ ಗೋಪಿಸೆಟ್ಟಿ ಅವರ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಕುಟುಂಬದವರೊಂದಿಗೂ ನಿರಂತರ ಸಂಪರ್ಕದಲ್ಲಿರುವುದಾಗಿ ಇನ್ಫೋಸಿಸ್ ತಿಳಿಸಿದೆ.
ಲಕ್ಷ್ ಗೋಪಿಸೆಟ್ಟಿ ಅವರು ಅಮೆರಿಕ ಮತ್ತು ಕೆನಡಾದ ಸಾರ್ವಜನಿಕ ವಲಯವನ್ನು ಕೇಂದ್ರೀಕರಿಸಿರುವ ಇನ್ಫೋಸಿಸ್ ಪಬ್ಲಿಕ್ ಸರ್ವೀಸಸ್‌ನ ಅಧ್ಯಕ್ಷ ಹಾಗೂ ಸಿಇಒ ಆಗಿದ್ದಾರೆ. ಅವರಿಗೆ ಮೂರು ದಶಕಗಳಿಗೂ ಅಧಿಕ ವೃತ್ತಿಪರ ಅನುಭವವಿದ್ದು, ಈ ಹಿಂದೆ ಇನ್ಫೋಸಿಸ್‌ನಲ್ಲಿ ಗ್ಲೋಬಲ್ ವೈಸ್ ಪ್ರೆಸಿಡೆಂಟ್ ಆಗಿ ಹಾಗೂ ಅಕ್ಸೆಂಚರ್‌ನಲ್ಲಿ ಆರೋಗ್ಯ ಮತ್ತು ಸಾರ್ವಜನಿಕ ಸೇವೆಗಳ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು








