ರಾಮನಗರ: ಇತ್ತೀಚೆಗೆ ಬೆಂಗಳೂರು ಮತ್ತು ಕರಾವಳಿಯಲ್ಲಿ ಖೋಟಾ ನೋಟು ದಂಧೆ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದರು. ಇದೀಗ ರಾಮನಗರದಲ್ಲಿ ಕೂಡ ಖೋಟಾ ನೋಟು ಜಾಲವೊಂದು ಪತ್ತೆ ಆಗಿದೆ. ಸಾರ್ವಜನಿಕರ ಕಣ್ಣುತಪ್ಪಿಸಿ ನಿರ್ಮಾಣ ಹಂತದ ಮನೆಯೊಂದರಲ್ಲೇ ಅಕ್ರಮವಾಗಿ ಖೋಟಾ ನೋಟುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರಜಿಲ್ಲಾ ಖದೀಮರ ಜಾಲವನ್ನು ಐಜೂರು ಪೊಲೀಸರು ಬಯಲಿಗೆಳೆದಿದ್ದು, ಐವರನ್ನು ವಶಕ್ಕೆ ಪಡೆದಿದ್ದಾರೆ.
ಶಾಂತಿಲಾಲ್ ಲೇಔಟ್‌ನ ನಿರ್ಮಾಣ ಹಂತದ ಮನೆಯಲ್ಲಿ ದಂಧೆ
ರಾಮನಗರದ ಶಾಂತಿಲಾಲ್ ಲೇಔಟ್‌ನಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಅಕ್ರಮ ದಂಧೆ ನಡೆಯುತ್ತಿತ್ತು. ಯಾರಿಗೂ ಸಂಶಯ ಬಾರದಂತೆ ಆ ಕಟ್ಟಡವನ್ನು ಅಡ್ಡೆ ಮಾಡಿಕೊಂಡಿದ್ದ ಗ್ಯಾಂಗ್, ನೋಟು ಮುದ್ರಣ ಮಾಡುತ್ತಿದ್ದರು. ಖಚಿತ ಮಾಹಿತಿ ಬೆನ್ನತ್ತಿದ ಐಜೂರು ಪೊಲೀಸರು ದಿಢೀರ್ ದಾಳಿ ನಡೆಸಿ ಜಾಲವನ್ನು ಭೇದಿಸಿದ್ದಾರೆ.
ವಿಶೇಷ ಪೇಪರ್ ಮತ್ತು ಕೆಮಿಕಲ್ ಬಳಕೆ
ಹೊರಗಿನಿಂದ ವಿಶೇಷ ಕಾಗದದ ಶೀಟ್‌ಗಳನ್ನು ತರಿಸಿ, ಅವುಗಳಿಗೆ ನಿರ್ದಿಷ್ಟ ಕೆಮಿಕಲ್ ಲೇಪಿಸಿ ಅಸಲಿ ನೋಟಿನಂತೆ ಕಾಣುವ 200 ಹಾಗೂ 500 ರೂ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿತ್ತು. ಮುದ್ರಿತ ಶೀಟ್‌ಗಳನ್ನು ಅಚ್ಚುಕಟ್ಟಾಗಿ ಕತ್ತರಿಸಿ, ಬಂಡಲ್‌ಗಳನ್ನಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.
ಇನ್ನು ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಮತ್ತು ಬೆರಳಚ್ಚು ತಜ್ಞರನ್ನೊಳಗೊಂಡ SOCO ತಂಡ ಭೇಟಿ ನೀಡಿ, ನೋಟು ಮುದ್ರಣಕ್ಕೆ ಬಳಸಿದ್ದ ರಾಸಾಯನಿಕ, ಕಾಗದ ಹಾಗೂ ಇತರೆ ಮಹತ್ವದ ಸಾಕ್ಷ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ.








