ಬೆಳಗಾವಿ: ಭಾನುವಾರದ ರಜೆಯ ಮಜಾ ಕಳೆಯಲು ಕೂತಿದ್ದ ಕಾರ್ಮಿಕರ ಮದ್ಯದ ಪಾರ್ಟಿಯೊಂದು ರಕ್ತಸಿಕ್ತವಾಗಿ ಮುಕ್ತಾಯಗೊಂಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ. ಊಟ ಮಾಡುವಾಗ ‘ಹೆಚ್ಚು ಚಿಕನ್ ಪೀಸ್ ತಿಂದಿದ್ದೀಯಾ’ ಎಂಬ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿದೆ.
ಉತ್ತರ ಪ್ರದೇಶ ಮೂಲದ ಕಾರ್ಮಿಕ ಸೀತಾರಾಮ್ ಚಂದ್ರದೇವ್ (ಕೊಲೆಯಾದ ವ್ಯಕ್ತಿ) ಹಾಗೂ ಅರುಣ್‌ಕುಮಾರ್ ಬಲಿಷ್ತಾರ್ ಚವಾಣ್ (ಆರೋಪಿ) ಘಟಪ್ರಭಾ ಸಮೀಪದ ಸ್ಟೀಲ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾ ಒಂದೇ ಶೆಡ್‌ನಲ್ಲಿ ವಾಸವಾಗಿದ್ದರು.
ಪಾರ್ಟಿಯಲ್ಲಿ ಶುರುವಾಯ್ತು ಚಿಕನ್ ಪೀಸ್ ಜಗಳ
ಭಾನುವಾರ ರಜೆ ಇದ್ದಿದ್ದರಿಂದ ಇಬ್ಬರೂ ಸೇರಿ ಮದ್ಯದ ಪಾರ್ಟಿ ಆಯೋಜಿಸಿ, ಚಿಕನ್ ಅಡುಗೆ ಮಾಡಿಕೊಂಡಿದ್ದರು. ಊಟಕ್ಕೆ ಕುಳಿತಾಗ ಯಾರಿಗೆ ಹೆಚ್ಚು ಚಿಕನ್ ಪೀಸ್‌ಗಳು ಸಿಕ್ಕಿವೆ ಎಂಬ ವಿಷಯವಾಗಿ ಸೀತಾರಾಮ್ ಮತ್ತು ಅರುಣ್ ನಡುವೆ ಮಾತಿಗೆ ಮಾತು ಬೆಳೆದಿದೆ. ಮದ್ಯದ ನಶೆಯಲ್ಲಿದ್ದ ಅರುಣ್‌ಗೆ ಆಕ್ರೋಶ ಹೆಚ್ಚಾಗಿ, ಅಲ್ಲೇ ಇದ್ದ ಚಾಕುವಿನಿಂದ ಸೀತಾರಾಮ್ ಅವರ ಎದೆಗೆ ಬಲವಾಗಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸೀತಾರಾಮ್ ಸ್ಥಳದಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ.
ಕತೆ ಕಟ್ಟಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ!
ಸ್ನೇಹಿತ ಅಸಹಾಯಕನಾಗಿ ಬಿದ್ದ ತಕ್ಷಣ ಬೆಚ್ಚಿಬಿದ್ದ ಆರೋಪಿ ಅರುಣ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಸುಳ್ಳು ಕಥೆ ಹೆಣೆದಿದ್ದ. ಗಾಯಾಳು ಸೀತಾರಾಮ್‌ನನ್ನು ಗೋಕಾಕ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, “ವೆಲ್ಡಿಂಗ್ ಕೆಲಸ ಮಾಡುವಾಗ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದಾನೆ” ಎಂದು ವೈದ್ಯರಿಗೆ ನಂಬಿಸಲು ಯತ್ನಿಸಿದ್ದ.
ಆದರೆ ಗಾಯದ ಸ್ವರೂಪ ನೋಡಿ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಘಟಪ್ರಭ ಪೊಲೀಸರು ನಡೆಸಿದ ತೀವ್ರ ವಿಚಾರಣೆ ವೇಳೆ ಅರುಣ್ ಸತ್ಯ ಬಾಗಿದ್ದಾನೆ.
ಆರೋಪಿ ಬಂಧನ
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಭೇದಿಸಲಾಗಿದ್ದು, ಕೊಲೆಗೆ ಬಳಸಿದ ಚಾಕುವನ್ನು ಜಪ್ತಿ ಮಾಡಿ ಆರೋಪಿ ಅರುಣ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ ಒಂದೆರಡು ಕೋಳಿ ತುಂಡುಗಳಿಗಾಗಿ ಜೊತೆಯಲ್ಲಿದ್ದ ಸ್ನೇಹಿತನನ್ನೇ ಬಲಿ ಪಡೆದ ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಘಾತ ಮೂಡಿಸಿದೆ.








